ADVERTISEMENT

ಮಾಲೀಕರಿಗೆ ಸಿ.ಎಂ ಚಾಟಿ

ಕಬ್ಬು ಬೆಳೆಗಾರರ ಸಂಕಷ್ಟ ನಿವಾರಣೆಗೆ ಸರ್ಕಾರದ ಸೂತ್ರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:31 IST
Last Updated 20 ನವೆಂಬರ್ 2018, 20:31 IST
   

ಬೆಂಗಳೂರು: ಹೋರಾಟನಿರತ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಸೂತ್ರ ರೂಪಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬಾಕಿ ಪಾವತಿಸದೇ ಇದ್ದರೆ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂಬ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಕಬ್ಬು ಬಾಕಿ ಪಾವತಿ ಮತ್ತು ವೈಜ್ಞಾನಿಕ ದರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಮಂಗಳವಾರ ಆರೂವರೆ ತಾಸು ಮುಖ್ಯಮಂತ್ರಿ ಚರ್ಚೆ
ನಡೆಸಿದರು.

ಬಾಕಿ ಪಾವತಿಗೆ ಕಾರ್ಖಾನೆ ಪ್ರತಿನಿಧಿಗಳು ಹಾಗೂ ರೈತ ಪ್ರತಿನಿಧಿಗಳ ಮಧ್ಯೆ ಕೆಲ ಸಂದರ್ಭಗಳಲ್ಲಿ ಮಾತಿನ ಚಕಮಕಿ ಕೂಡ ನಡೆಯಿತು.

ADVERTISEMENT

ಕಾರ್ಖಾನೆ ಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಕ್ಕರೆ ಸಚಿವ ಕೆ.ಜೆ. ಜಾರ್ಜ್‌ ಅವರು ಪ್ರತ್ಯೇಕ ಸಭೆಯನ್ನೂ ನಡೆಸಿ
ದರು. ಹಾಗಿದ್ದರೂ ಸಹಮತ ಮೂಡಲಿಲ್ಲ.

ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ರೈತರು ನನ್ನ ಭಾವನೆಗೆ ಸ್ಪಂದಿಸಿದ್ದಾರೆ. ಪರಸ್ಪರ ವಿಶ್ವಾಸದಲ್ಲಿ ಸಮಸ್ಯೆ ಇತ್ಯರ್ಥಪಡಿಸಲು ಒಪ್ಪಿದ್ದಾರೆ. ಆದರೆ, ಕಾರ್ಖಾನೆ ಮಾಲೀಕರು ತಮ್ಮ ಮಾತು ಕಾರ್ಯರೂಪಕ್ಕೆ ತರುವಲ್ಲಿ ಮತ್ತು ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ ಇನ್ನೂ ತೀರ್ಮಾನಕ್ಕೆ ಬಂದಿಲ್ಲ’ ಎಂದರು.

‘ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಕೊಟ್ಟ ಮಾತಿನಂತೆ ಬಾಕಿ ಪಾವತಿಸಬೇಕು. ಮಾತು ತಪ್ಪಿದರೆ ಸರ್ಕಾರ ಕ್ರಮ ಕೈಕೊಳ್ಳಲಿದೆ’ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

‘ಮುಂದಿನ ದಿನಗಳಲ್ಲಿ ರೈತರಿಗೆ ಕಾರ್ಖಾನೆಗಳಿಂದ ತೂಕ, ಇಳುವರಿ ಪ್ರಮಾಣ, ಕಟಾವು ಮತ್ತು ಸಾರಿಗೆ ವೆಚ್ಚ ಮೊದಲಾದ ವಿಷಯಗಳಲ್ಲಿ ಮೋಸವಾಗದಂತೆ ತಡೆಯಲು ನಿಯಮಾವಳಿ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ರೈತರ ಮನವಿಯಲ್ಲಿದ್ದ 13 ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 2018-19ರ ಹಂಗಾಮಿನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಟನ್‌ಗೆ ₹ 2,750 ಎಫ್‌ಆರ್‌ಪಿ ದರದಲ್ಲಿ ಕಬ್ಬು ಖರೀದಿಸಿ, 15 ದಿನಗಳ ಒಳಗೆ ಒಂದೇ ಹಂತದಲ್ಲಿ ಹಣ ಪಾವತಿಸಲು ಕಾರ್ಖಾನೆ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.

ಎಫ್‌ಆರ್‌ಪಿ ದರವನ್ನು ಎಕ್ಸ್– ಫೀಲ್ಡ್‌ನಲ್ಲಿ (ಜಮೀನಿನಲ್ಲಿ) ನಿಗದಿಪಡಿಸುವ ಬಗ್ಗೆ ಪರಿಶೀಲಿಸಲು ಸಕ್ಕರೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಭೆಯ ತೀರ್ಮಾನಗಳು

* ಇದೇ 22ರೊಳಗೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ

* ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕಾನೂನು ತಿದ್ದುಪಡಿ.

* ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ

* ಕೇಂದ್ರ ನಿಗದಿಪಡಿಸಿದ ₹ 2,750 ಎಫ್‌ಆರ್‌ಪಿಯಲ್ಲಿ ಕಬ್ಬು ಖರೀದಿಗೆ ಸೂಚನೆ

* ರೈತರ ಪ್ರಕಾರ ಕಬ್ಬು ಬಾಕಿ ₹ 450 ಕೋಟಿ ಇದೆ. ನಿಖರ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ

* ಅಳತೆ, ತೂಕದಲ್ಲಿನಮೋಸ ತಪ್ಪಿಸಲು ಅತ್ಯಾಧುನಿಕ ಯಂತ್ರೋಪಕರಣ ಅಳವಡಿಕೆ

* ಪ್ರತಿಭಟನೆಗಾರರ ಮೇಲಿನ ಎಲ್ಲ ಮೊಕದ್ದಮೆ ವಾಪಸ್‌

*ಸಕ್ಕರೆ ಕಾರ್ಖಾನೆ ಮಾಲೀಕರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಉದ್ಧಟತನ ತೋರಿದರೆ ನಿಯಂತ್ರಿಸುವ ಕೀಲಿಕೈ ಸರ್ಕಾರದ ಬಳಿ ಇದೆ

- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

*ಮುಖ್ಯಮಂತ್ರಿ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಶೀಘ್ರದಲ್ಲೇ ಪ್ರಧಾನಿಯನ್ನು ಭೇಟಿ ಮಾಡಿ ಎಫ್‌ಆರ್‌ಪಿ ಹೆಚ್ಚಿಸುವಂತೆ ಆಗ್ರಹಿಸುತ್ತೇವೆ

- ಕೆ.ಟಿ. ಗಂಗಾಧರ, ರಾಜ್ಯ ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.