ADVERTISEMENT

ಕಬ್ಬು ಬೆಳೆಗಾರರಿಗೆ ನೆರವಾಗುವ ನಿರ್ಧಾರ ತೆಗೆದುಕೊಳ್ಳಿ: ಸರ್ಕಾರಕ್ಕೆ ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 8:05 IST
Last Updated 7 ನವೆಂಬರ್ 2025, 8:05 IST
ವಿಜಯೇಂದ್ರ
ವಿಜಯೇಂದ್ರ   

ಬೆಂಗಳೂರು: ‘ಕಬ್ಬು ಬೆಳೆಗಾರರ ಜತೆಗೆ ಸಭೆ ನಡೆಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರಾ ತಡ ಮಾಡಿದ್ದಾರೆ. ಈಗಲಾದರೂ ಸರಿಯಾದ ನಿರ್ಧಾರ ತೆಗೆದುಕೊಂಡು, ಕಬ್ಬು ಬೆಳೆಗಾರರಿಗೆ ನೆರವಾಗಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ವಂದೇ ಮಾತರಂ ಗೀತೆ ರಚನೆಯ 150ನೇ ವರ್ಷಾಚರಣೆಯ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಕಬ್ಬು ಬೆಳೆಗಾರರು ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಅವರನ್ನು ಈಗ ಸಭೆಗೆ ಕರೆದಿದೆ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಕಬ್ಬು ಅರೆಯುವ ದಿನಕ್ಕಿಂತ ಒಂದೆರಡು ತಿಂಗಳು ಮೊದಲು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿ, ದರ ನಿಗದಿ ಮಾಡಬೇಕಿತ್ತು’ ಎಂದರು.

ADVERTISEMENT

‘ಈ ಹಿಂದೆಯೂ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ, ಕಬ್ಬು ಬೆಳೆಗಾರ ವಿಠ್ಠಲ ಅರಬಾವಿ ಅವರು ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದನ್ನು ಸಿದ್ದರಾಮಯ್ಯ ಅವರು ನೆನಪಿನಲ್ಲಿ ಇರಿಸಿಕೊಳ್ಳಬೇಕಿತ್ತು. ಹೀಗಿದ್ದೂ ಸಭೆ ಕರೆಯುವಲ್ಲಿ ಸರ್ಕಾರದ ವಿಳಂಬವು, ರೈತರ ಬಗೆಗಿನ ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಎಷ್ಟೇ ಬೆಲೆ ನಿಗದಿ ಮಾಡಿದ್ದರೂ, ರಾಜ್ಯವು ಅದಕ್ಕಿಂತ ಹೆಚ್ಚಿನ ದರದಲ್ಲಿ ಕಬ್ಬು ಖರೀದಿಸಲು ಅವಕಾಶವಿದೆ. ಅದನ್ನು ಗಮನದಲ್ಲಿ ಇರಿಸಿಕೊಂಡು ಸಿದ್ದರಾಮಯ್ಯ ಅವರು ನಿರ್ಧಾರ ತೆಗೆದುಕೊಳ್ಳಬೇಕು. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ, ಬಿಜೆಪಿ ಮೇಲೆ ಆರೋಪ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ’ ಎಂದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಗಮನ ನೀಡುತ್ತಿರುವುದರಲ್ಲಿ, ಸ್ವಲ್ಪವಾದರೂ ರೈತರ ಬಗ್ಗೆ ಯೋಚಿಸಿದ್ದರೆ ಈ ಸಮಸ್ಯೆಯೇ ಎದುರಾಗುತ್ತಿರಲಿಲ್ಲ
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.