ADVERTISEMENT

ಅವೈಜ್ಞಾನಿಕ ದರ ನಿಗದಿ; ರೈತರ ಆಕ್ರೋಶ

ಮೊದಲ ಕಂತಿನ ಹಣ ಪಾವತಿ ಆರಂಭ;

ಶ್ರೀಕಾಂತ ಕಲ್ಲಮ್ಮನವರ
Published 17 ಜನವರಿ 2019, 13:05 IST
Last Updated 17 ಜನವರಿ 2019, 13:05 IST

ಬೆಳಗಾವಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ನೀಡುತ್ತಿರುವ ಮೊದಲ ಕಂತಿನ ದರವು ಅವೈಜ್ಞಾನಿಕವಾಗಿದೆ. ಇಳುವರಿ ಆಧಾರದ ಮೇಲೆ ಕಬ್ಬಿಗೆ ದರ ನೀಡುತ್ತಿಲ್ಲ. ಸರ್ಕಾರ ನಿಗದಿಪಡಿಸಿದ್ದಕ್ಕಿಂತಲೂ ಕಡಿಮೆ ದರ ನೀಡುತ್ತಿವೆ ಎಂದು ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಬೆಳೆಗಾರರಿಗೆ ಮೊದಲ ಕಂತಿನ ಹಣ ಪಾವತಿಸಲು ಜಿಲ್ಲೆಯ ಎಲ್ಲ 22 ಕಾರ್ಖಾನೆಗಳು ಪ್ರಾರಂಭಿಸಿವೆ. ಆದರೆ, ಈ ದರ ತಮಗೆ ಒಪ್ಪಿಗೆ ಇಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವು ದರ ನಿಗದಿ ಮಾಡಿ ಕಳೆದ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಿತ್ತು. ಈ ದರದ ಅನುಗುಣವಾಗಿ ಸಕ್ಕರೆ ಕಾರ್ಖಾನೆಗಳು ನೀಡುತ್ತಿಲ್ಲ. ಪ್ರತಿ ಟನ್‌ ಕಬ್ಬಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸುತ್ತಿರುವ ಕಾರ್ಖಾನೆಗಳು ಕೂಡ ಕನಿಷ್ಠ ಎಫ್‌ಆರ್‌ಪಿ ದರ (ನ್ಯಾಯ ಹಾಗೂ ಲಾಭದಾಯಕ ದರ) ನೀಡುತ್ತಿವೆ ಎಂದು ರೈತರು ಆಕ್ಷೇಪ ಎತ್ತಿದ್ದಾರೆ.

ADVERTISEMENT

ಕಳೆದ ವರ್ಷ ಅಂದರೆ 2017–18ನೇ ಸಾಲಿನಲ್ಲಿ ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ (ಇಳುವರಿ) ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು 2018–19ನೇ ಸಾಲಿಗೆ ನಿರ್ದೇಶನಾಲಯವು ದರ ನಿಗದಿಪಡಿಸಿತ್ತು. ಜಿಲ್ಲೆಯ ವಿವಿಧ ಕಾರ್ಖಾನೆಗಳು ಶೇ 10ರಿಂದ ಶೇ 12.40ರವರೆಗೆ ಇಳುವರಿ ತೆಗೆದಿದ್ದವು. ಇಳುವರಿ ಆಧಾರದ ಮೇಲೆ ಎಫ್‌ಆರ್‌ಪಿ ದರವೂ ಹೆಚ್ಚಳವಾಗಬೇಕು.

ಉದಾಹರಣೆಗೆ, ಕಳೆದ ವರ್ಷ ಪ್ರತಿ ಟನ್‌ ಕಬ್ಬಿಗೆ ಶೇ 10ರಷ್ಟು ಸಕ್ಕರೆ ಉತ್ಪಾದಿಸಿದ್ದ ರಾಯಬಾಗದ ರೇಣುಕಾ ಶುಗರ್ಸ್‌ ಲಿಮಿಟೆಡ್‌ ಕಾರ್ಖಾನೆಗೆ ₹ 2,750 , ಶೇ 11.07 ಇಳುವರಿ ತೆಗೆದಿದ್ದ ಅಥಣಿ ಶುಗರ್ಸ್‌ ಕಾರ್ಖಾನೆಗೆ ₹ 3,044, ಶೇ 12.40 ಇಳುವರಿ ತೆಗೆದಿದ್ದ ಚಿಕ್ಕೋಡಿಯ ವೆಂಕಟೇಶ್ವರ ಪವರ್‌ ಪ್ರಾಜೆಕ್ಟ್‌ ಲಿಮಿಟೆಡ್‌ ಕಾರ್ಖಾನೆಗೆ ₹ 3,410 ದರ ನಿಗದಿಪಡಿಸಲಾಗಿತ್ತು.

‘ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದ ಕಾರ್ಖಾನೆಗಳು, ಪ್ರತಿ ಟನ್‌ ಕಬ್ಬಿಗೆ ₹ 2,300 ದಿಂದ ₹ 2,500 ನೀಡುತ್ತಿವೆ. ಕಬ್ಬು ಕಟಾವು ಹಾಗೂ ಸಾಗಾಟ ವೆಚ್ಚವನ್ನು ಕಾರ್ಖಾನೆಗಳು ಭರಿಸುತ್ತಿಲ್ಲ. ಇದರಿಂದಾಗಿ ₹ 200ದಿಂದ ₹ 300ವರೆಗಿನ ವೆಚ್ಚವೂ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಇದನ್ನು ತೆಗೆದು ನೋಡಿದರೆ, ರೈತರಿಗೆ ಕೇವಲ ₹ 2,100ದಿಂದ ₹ 2,300 ಮಾತ್ರ ಸಿಗುತ್ತಿದೆ’ ಎಂದು ರೈತ ಮುಖಂಡ ಸಿದಗೌಡ ಮೋದಗಿ ದೂರಿದರು.

ಸಬ್ಸಿಡಿ ಹಣಕ್ಕೂ ಕನ್ನ:‘ಕೇಂದ್ರ ಸರ್ಕಾರವು ಕಳೆದ ವರ್ಷ ರೈತರಿಗೆ ಪ್ರತಿ ಟನ್‌ ಕಬ್ಬಿಗೆ ₹ 180 ಸಬ್ಸಿಡಿ ನೀಡಿತ್ತು. ಕೆಲವು ಕಾರ್ಖಾನೆಗಳು ಈ ಹಣವನ್ನು ಸೇರಿಸಿಕೊಂಡು ಎಫ್‌ಆರ್‌ಪಿ ದರ ನೀಡುತ್ತಿವೆ. ಇದನ್ನು ತಕ್ಷಣ ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ಪಾವತಿ ಆರಂಭಿಸಿವೆ– ಡಿ.ಸಿ:‘ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಮೊದಲ ಕಂತಿನ ಹಣ ಪಾವತಿ ನೀಡಲು ಆರಂಭಿಸಿವೆ. ಎಫ್‌ಆರ್‌ಪಿ ದರದಂತೆ ಪ್ರತಿ ಟನ್‌ ಕಬ್ಬಿಗೆ ₹ 2,750 ನೀಡುತ್ತಿವೆ. ಕಬ್ಬು ಕಟಾವು ಹಾಗೂ ಸಾಗಾಟದ ವೆಚ್ಚ ಭರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.