
ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಲೆ ತೀರಾ ಕಡಿಮೆ ಇರುವುದರಿಂದ ಕಲಬುರಗಿ ಭಾಗದ ಕಬ್ಬು ಮಹಾರಾಷ್ಟ್ರಕ್ಕೂ, ಚಾಮರಾಜನಗರ ಜಿಲ್ಲೆಯ ಕಬ್ಬು ತಮಿಳುನಾಡಿಗೆ ಹೋಗುತ್ತಿದೆ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ₹3,550 ಎಫ್‌ಆರ್‌ಪಿ ನಿಗದಿಪಡಿಸಿದೆ. ಆದರೆ, ನಮ್ಮಲ್ಲಿರುವ 81 ಕಾರ್ಖಾನೆಗಳು ಆ ದರ ಕೊಡುತ್ತಿಲ್ಲ ಹೀಗಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದರು.
‘ನಮ್ಮ ರಾಜ್ಯದ ಸಕ್ಕರೆ ಕಾರ್ಖಾನೆಗಳು ಟನ್‌ಗೆ ₹2,700 ರಿಂದ ₹3,100 ನೀಡುತ್ತಿದ್ದಾರೆ. ಒಂದು ಟನ್‌ಗೆ ಸರಾಸರಿ ₹400 ರಿಂದ ₹800 ರಷ್ಟು ಕಡಿಮೆ ಕೊಡುತ್ತಿದ್ದಾರೆ. ಮಹಾರಾಷ್ಟ್ರ ಒಂದು ಟನ್‌ಗೆ ₹3,400 ಕೊಡುತ್ತಿದೆ. ಕೇಂದ್ರ ನಿಗದಿಪಡಿಸಿರುವುದನ್ನು ಕೊಡಿ ಎಂದು ರೈತರು ಕೇಳುತ್ತಿದ್ದಾರೆ. ನಾನು ಸಿಎಂ, ನೀನು ಸಿಎಂ ಎಂಬ ಅಧಿಕಾರದ ಗೊಂದಲದಲ್ಲಿ ಜನರ ಸಮಸ್ಯೆ ಮರೆತಿದ್ದಾರೆ. ಇದರ ಕಡೆಗೆ ಗಮನಹರಿಸಬೇಕು. ರೈತರೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅಲ್ಲಿದ್ದವರು ತಡೆದ ಕಾರಣ ಜೀವ ಉಳಿದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.