ಮಂಡ್ಯ: ‘ಸಾಮಾಜಿಕ ಜಾಲತಾಣದಲ್ಲಿನ ಟ್ರೋಲ್, ಕೀಳುತನದ ಮಾತುಗಳು ನನಗೆ ಹೊಸದಲ್ಲ, ಐದಾರು ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದೇನೆ. ಮೈಸೂರು ಜಿಲ್ಲೆ ಕೆ.ಆರ್. ನಗರದಲ್ಲಿ ನನ್ನ ಮೇಲೆ ಹಲ್ಲೆ ಆಗಿತ್ತು. ನಾನು ಪೊಲೀಸರಿಗೆ ದೂರು ನೀಡಿದ್ದೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ನನಗೆ ನ್ಯಾಯವೂ ಸಿಕ್ಕಿಲ್ಲ’ ಎಂದು ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಷ್ ದೂರಿದರು.
ಚಿತ್ರನಟಿ ರಮ್ಯಾ ವಿರುದ್ಧ ಟ್ರೋಲ್ ಮಾಡುತ್ತಿರುವ ಬಗ್ಗೆ ನಗರದಲ್ಲಿ ಶುಕ್ರವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ಹೆಣ್ಣು ಮಕ್ಕಳಿಗೆ ಕೆಟ್ಟ ರೀತಿಯ ಕಮೆಂಟ್ ಮಾಡಬಾರದು. ನಾನು ರಮ್ಯಾ ಅವರ ಸೋಶಿಯಲ್ ಮೀಡಿಯಾ ನೋಡಿಲ್ಲ. ಪೊಲೀಸ್ ತನಿಖೆ ಮಾಡಿ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ನ್ಯಾಯ ಅನ್ನೋದು ಪ್ರತಿಯೊಬ್ಬರಿಗೂ ಸಿಗಬೇಕು’ ಎಂದರು.
‘ಕೆಲವರು ಅನಾಮಿಕರಾಗಿ ಪೋಸ್ಟ್ ಹಾಕುತ್ತಿದ್ದೇವೆ ಅಂದುಕೊಂಡಿದ್ದಾರೆ. ಇದನ್ನು ತಂತ್ರಜ್ಞಾನದಿಂದ ಪತ್ತೆ ಹಚ್ಚಬಹುದಾಗಿದೆ. ಸೋಷಿಯಲ್ ಮೀಡಿಯಾವನ್ನು ಹೇಗೆ ಬಳಸಬೇಕೆಂದು ಯುವ ಸಮೂಹ ಯೋಚಿಸಬೇಕು. ಬೇರೆಯವರನ್ನು ಟಾರ್ಗೆಟ್ ಮಾಡುವ ಅಸ್ತ್ರ ಅಂತ ಅಂದುಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ಯಾರೇ ಆಗಲಿ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಕೋರ್ಟ್ ದೋಷಿ ಅಂತ ತೀರ್ಪು ಕೊಟ್ಟ ಮೇಲೆ ಮಾತಾಡೋಕೆ ಏನೂ ಇಲ್ಲ. ಶಿಕ್ಷೆ ಏನು ಪ್ರಕಟವಾಗುತ್ತೆ ಅನ್ನೋದನ್ನು ನೋಡೋಣ’ ಎಂದರು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ಆರೋಪ ಮಾಡುವುದು ತುಂಬಾ ಸುಲಭ. ಆರೋಪ ಸಾಬೀತು ಆಗುವವರೆಗೆ ಮಾತಾಡೋದು ಸರಿಯಲ್ಲ. ಯಾರೋ ಒಬ್ಬರು ಏನೋ ಹೇಳಿದ ತಕ್ಷಣ ನಿಜ ಆಗಬೇಕು ಅಂತಾ ಏನೂ ಇಲ್ಲ. ತನಿಖೆಯಿಂದ ಸತ್ಯ ಸತ್ಯತೆ ಹೊರ ಬರುತ್ತೆ. ಪ್ರತಿಯೊಬ್ಬರು ನಾವೇ ಒಂದೊಂದು ಜಡ್ಜ್‌ಮೆಂಟ್ ಕೊಡಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.