ADVERTISEMENT

ಬಿಎಸ್‌ವೈ ಆಡಳಿತಕ್ಕೆ ಭದ್ರತೆ ಕೊಡಿ: ನಳಿನ್‌

ಸೋಲುವ ಭೀತಿಯಿಂದ ಕಾಂಗ್ರೆಸ್‌ ಗೂಂಡಾಗಿರಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 18:56 IST
Last Updated 30 ಅಕ್ಟೋಬರ್ 2020, 18:56 IST
ನಳಿನ್‌
ನಳಿನ್‌   

ಬೆಂಗಳೂರು: ‘ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತಕ್ಕೆ ಭದ್ರತೆ ಕೊಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಮನವಿ ಮಾಡಿದರು.

ಕ್ಷೇತ್ರದ ಮತದಾರರ ಜತೆ ಶುಕ್ರವಾರ ವರ್ಚುವಲ್ ಸಂವಾದ ನಡೆಸಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅಲ್ಪಾವಧಿಯಲ್ಲೇ ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನೆಡೆಗೆ ಕೊಂಡೊಯ್ಯುತ್ತಿದ್ದಾರೆ. ಕೆಂಪೇಗೌಡರು ಕನಸು ಕಂಡ ಬೆಂಗಳೂರಿನ ನಿರ್ಮಾಣಕ್ಕೆ ಬಿಜೆಪಿಯನ್ನು ಕ್ಷೇತ್ರದ ಜನ ಬೆಂಬಲಿಸಬೇಕು ಎಂದರು.

ಸೋಲಿನ ಭೀತಿ ಎದುರಿಸುತ್ತಿರುವ ಕಾರಣಕ್ಕೆ ಕಾಂಗ್ರೆಸ್‌ ಜಾತಿ ರಾಜಕಾರಣ ಮಾಡುತ್ತಿದೆ. ಬಿಜೆಪಿ ಎಂದಿಗೂ ಜಾತಿ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾ ಬಂದಿದೆ. ಕಾಂಗ್ರೆಸ್‌ಗೆ ಯಾವಾಗ ಸೋಲಿನ ಭೀತಿ ಶುರುವಾಗುತ್ತದೆಯೋ ಆಗೆಲ್ಲ ಅಪಪ್ರಚಾರ ಆರಂಭಿಸುತ್ತದೆ. ಗೂಂಡಾಗಿರಿಗೆ ಕೈ ಹಾಕುತ್ತದೆ. ಅದೆಲ್ಲವೂ ಆಗುವುದಿಲ್ಲವೆಂದಾಗ ಮತಗಟ್ಟೆ ವಶಪಡಿಸಿಕೊಳ್ಳಲು ಮುಂದಾಗುತ್ತದೆ. ಹಿಂದೆಲ್ಲ ಇಂತಹದನ್ನು ಕಾಂಗ್ರೆಸ್ ಮಾಡಿದೆ ಎಂದು ಟೀಕಿಸಿದರು.

ADVERTISEMENT

ಆರ್‌.ಆರ್. ನಗರದಲ್ಲಿ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುನಿರತ್ನ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರಾಮಚಂದ್ರ ಹಾಗೂ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜುಗೌಡ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ಬಿಜೆಪಿಯ ಶಕ್ತಿಯನ್ನು ಇಮ್ಮಡಿಗೊಳಿಸಿದೆ ಎಂದರು.

ಕರ್ನಾಟಕದಲ್ಲಿ ಹಿಂದೆಲ್ಲ ವಿರೋಧ ಪಕ್ಷದಲ್ಲಿದ್ದವರು ಆಡಳಿತ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎರಡು ಆಡಳಿತ ಪಕ್ಷಗಳ 18 ಶಾಸಕರು ರಾಜೀನಾಮೆ ಕೊಟ್ಟು ವಿರೋಧ ಪಕ್ಷಕ್ಕೆ ಬಂದರು. ಇದು ಕರ್ನಾಟಕ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದೆ. ಬಿಜೆಪಿಯ ಅಭಿವೃದ್ಧಿ ಪರ ರಾಜಕಾರಣದ ಮೇಲೆ ನಂಬಿಕೆ ಇಟ್ಟು, ಸ್ವಾಭಿಮಾನಕ್ಕಾಗಿ ಇವರೆಲ್ಲರೂ ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.

ಅಭ್ಯರ್ಥಿ ಮುನಿರತ್ನ ಭಾವಚಿತ್ರವೇ ಇಲ್ಲ!

ನಳಿನ್ ನಡೆಸಿದ ವರ್ಚುವಲ್ ಸಭೆಯಲ್ಲಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಅಭ್ಯರ್ಥಿ ಮುನಿರತ್ನ ಭಾವಚಿತ್ರವೇ ಇರಲಿಲ್ಲ!

ಆರ್.ಆರ್. ನಗರ ಉಪಚುನಾವಣೆ ಪ್ರಚಾರ ಸಭೆ ಎಂದು ಬರೆಯಲಾಗಿದ್ದ ಬ್ಯಾನರ್‌ನಲ್ಲಿ ಪ್ರಧಾನಿ, ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಅಧ್ಯಕ್ಷ ನಳಿನ್, ಸಚಿವ ಆರ್. ಅಶೋಕ ಹಾಗೂ ಶಾಸಕ ಅರವಿಂದ ಲಿಂಬಾವಳಿ ಭಾವಚಿತ್ರ ಮಾತ್ರ ಇದ್ದುದು ವಿಶೇಷವಾಗಿ ಗಮನ ಸೆಳೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.