ನವದೆಹಲಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರೆ ಆರು ಆರೋಪಿಗಳಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಛೀಮಾರಿ ಹಾಕಿದೆ.
ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಆರ್.ಮಹಾದೇವನ್ ಅವರ ಪೀಠವು ತೀರ್ಪು ಕಾಯ್ದಿರಿಸಿದೆ. ‘ಆದೇಶ ಹೊರಡಿಸಿದ ರೀತಿ ನೋಡಿದರೆ ಇದು ಖುಲಾಸೆಗೊಳಿಸುವ ಪ್ರಕರಣ ಎಂದು ನ್ಯಾಯಾಲಯ ನಿರ್ಧರಿಸಿದಂತೆ ಕಾಣುತ್ತಿದೆ’ ಎಂದು ಕಟುವಾಗಿ ಟೀಕಿಸಿದೆ.
‘ಇದು ಪ್ರಾಥಮಿಕವಾಗಿ ವಿವೇಚನಾ ಅಧಿಕಾರದ ಮತಿಗೆಟ್ಟ ದುರುಪಯೋಗ’ ಎಂದಿರುವ ನ್ಯಾಯಪೀಠ, 2024ರ ಡಿಸೆಂಬರ್ 13ರ ತನ್ನ ಆದೇಶದಲ್ಲಿ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಧಾರವೇನು ಎಂದು ಪ್ರಶ್ನಿಸಿರುವು
ದನ್ನು ತೀವ್ರವಾಗಿ ಆಕ್ಷೇಪಿಸಿದೆ. ‘ಹತ್ಯೆಯ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಆಧಾರವೇನು ಎಂಬುದನ್ನು ಉಲ್ಲೇಖಿಸಿಲ್ಲ ಎಂದು ಜಾಮೀನು ಆದೇಶದಲ್ಲಿ ಕಾರಣ ನೀಡಿರುವುದು ತೀವ್ರ ಆಕ್ಷೇಪಾರ್ಹವಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ವಕೀಲ ಡಿ.ಎಲ್.ಚಿದಾನಂದ ಮತ್ತು ಆರೋಪಿಗಳ ಪರ ಹಿರಿಯ ವಕೀಲ ಸಿದ್ಧಾರ್ಥ ದವೆ ಮತ್ತು ಇತರರ ವಾದಗಳನ್ನು ಸುಪ್ರೀಂ ಕೋರ್ಟ್ ಆಲಿಸಿತು.
ರಾಜ್ಯ ಸರ್ಕಾರ ಮತ್ತು ಆರೋಪಿಗಳ ಪರ ವಕೀಲರು ಸಲ್ಲಿಸಿದ ಲಿಖಿತ ಟಿಪ್ಪಣಿಗಳನ್ನು ದಾಖಲಿಸಿಕೊಂಡ ಪೀಠವು, ಒಂದು ವಾರದೊಳಗೆ ಸಂಕ್ಷಿಪ್ತ ಟಿಪ್ಪಣಿಗಳನ್ನು ಸಲ್ಲಿಸುವಂತೆ ಉಳಿದ ವಕೀಲರಿಗೆ ಸೂಚಿಸಿತು.
ಪ್ರಕರಣದಲ್ಲಿ 65 ಸಾಕ್ಷಿಗಳಿದ್ದು, ನಿತ್ಯ ವಿಚಾರಣೆ ನಡೆಸಿದರೆ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಲೂತ್ರಾ ಹೇಳಿದರು. ಆಗ ಪೀಠವು, ‘ಈ
ಪ್ರಕರಣದಲ್ಲಿ ದಿನನಿತ್ಯದ ವಿಚಾರಣೆ ಏಕೆ ನಡೆಸಬೇಕು’ ಎಂದು ಪ್ರಶ್ನಿಸಿತು. ‘ಹಲವಾರು ವಿಚಾರಣಾಧೀನ ಖೈದಿಗಳು ಕಳೆದ 5–7 ವರ್ಷಗಳಿಂದ ತಮ್ಮ ವಿಚಾರಣೆ ಆರಂಭಗೊಳ್ಳಲು ಕಾಯುತ್ತಲೇ ಇದ್ದಾರೆ’ ಎಂದು ಹೇಳಿತು.
ಸಿದ್ಧಾರ್ಥ ದವೆ ಅವರು ಹೈಕೋರ್ಟ್ ಆದೇಶವನ್ನು ಸಮರ್ಥಿಸಿಕೊಂಡರು. ‘ನ್ಯಾಯಾಲಯದ ಅಭಿಪ್ರಾಯಗಳು ಪ್ರಾಥಮಿಕವಾಗಿವೆ ಮತ್ತು ಅದು ವಿಚಾರಣಾ ನ್ಯಾಯಾಲಯದ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದರು. ಜೊತೆಗೆ, ಇಬ್ಬರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲು ತುಂಬಾ ವಿಳಂಬವಾಗಿದ್ದರಿಂದ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಆಗ ನ್ಯಾಯಪೀಠ, ‘ಹೈಕೋರ್ಟ್ ಇದು ಖುಲಾಸೆಗೊಳಿಸುವ ಪ್ರಕರಣದಂತೆ ತೀರ್ಪು ನೀಡಿದೆ ಎಂದು ನಿಮಗೆ ಅನ್ನಿಸುತ್ತಿಲ್ಲವೇ... ಕಾರಣಗಳನ್ನು ನೀಡಲು ಸಾಕಷ್ಟು ವಿಧಾನಗಳಿವೆ’ ಎಂದು ಹೇಳಿತು.
ರೇಣುಕಸ್ವಾಮಿ ಅವರನ್ನು ಕೊಲೆ ಮಾಡಿ ಮೋರಿಯಲ್ಲಿ ಎಸೆಯಲಾಗಿತ್ತು. ಆರೋಪಿಗಳು ಎರಡು ಕಾರುಗಳಲ್ಲಿ ಓಡಾಡಿದ ಬಗ್ಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ರೇಣುಕಸ್ವಾಮಿ ಮೇಲೆ ದರ್ಶನ್ ತೀವ್ರ ಹಲ್ಲೆ ನಡೆಸಿದ್ದರು. ಇಬ್ಬರು ಪ್ರತ್ಯಕ್ಷದರ್ಶಿ ಸಾಕ್ಷಿಗಳಿದ್ದಾರೆ. ಆರೋಪಿಗಳ ವಿರುದ್ಧ ಪ್ರಬಲ ಪುರಾವೆಗಳು ಇವೆ. ಜಾಮೀನು ಪಡೆದ ಬಳಿಕ ದರ್ಶನ್ ಪ್ರಕರಣದ ಸಾಕ್ಷಿಗಳ ಜತೆಗೆ ಓಡಾಡಿದ್ದಾರೆ. ಅವರ ಜಾಮೀನು ರದ್ದುಗೊಳಿಸಬೇಕು.ಸಿದ್ಧಾರ್ಥ ಲೂತ್ರಾ, ರಾಜ್ಯ ಸರ್ಕಾರದ ವಕೀಲ
ಪ್ರಕರಣದ ತನಿಖೆಯೇ ದೋಷಪೂರಿತವಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ವಿರೋಧಾಭಾಸದಿಂದ ಕೂಡಿದೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ. ಒಬ್ಬ ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಘಟನೆ ನಡೆದ 12 ದಿನಗಳ ಬಳಿಕವಷ್ಟೇ ದಾಖಲಿಸಲಾಗಿದೆ. ಅವರ ಹೇಳಿಕೆಗಳನ್ನು ವಿಳಂಬವಾಗಿ ದಾಖಲಿಸಿದ್ದರಿಂದ ಅವುಗಳನ್ನು ನಂಬುವಂತಿಲ್ಲ. ಅವರ ಸಾಕ್ಷ್ಯಗಳನ್ನು ಬೆಂಬಲಿಸಲು ಆರೋಪಪಟ್ಟಿಯಲ್ಲಿ ಯಾವುದೇ ಪುರಾವೆಗಳಿಲ್ಲ. ಇದಲ್ಲದೇ, ಪ್ರಕರಣದಲ್ಲಿ 272 ಸಾಕ್ಷಿಗಳಿದ್ದು, ವಿಚಾರಣೆ ಇನ್ನೂ ಆರಂಭವಾಗಿಲ್ಲ.ಸಿದ್ಧಾರ್ಥ ದವೆ, ದರ್ಶನ್ ಪರ ವಕೀಲ
ಹೈಕೋರ್ಟ್ ನ್ಯಾಯಮೂರ್ತಿಯು ಇಂತಹ ತಪ್ಪು ಮಾಡುವುದೇ: ನ್ಯಾಯಪೀಠ
*ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವಲ್ಲಿ ತನ್ನ ವಿವೇಚನೆಯನ್ನು ಹೈಕೋರ್ಟ್ ಬಳಸಿಕೊಂಡ ರೀತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಇದು ಆರೋಪಿಗಳು ಖುಲಾಸೆಯಾಗುವಂತೆ ತೀರ್ಪು ನೀಡಿದಂತಿದೆ ಎಂದಿದೆ. ‘ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ನಮಗೆ ಹೇಳಲು ವಿಷಾದವಾಗುತ್ತದೆ, ಆದರೆ, ಹೈಕೋರ್ಟ್ ಎಲ್ಲ ಜಾಮೀನು ಅರ್ಜಿಗಳಲ್ಲಿಯೂ ಇಂತಹದೇ ಆದೇಶವನ್ನು ನೀಡುತ್ತದೆಯೇ’ ಎಂದು ಪ್ರಶ್ನಿಸಿದೆ.
* ‘ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ರೀತಿ ನಮಗೆ ಬೇಸರ ತಂದಿದೆ. ಕೊನೆಯದಾಗಿ ನ್ಯಾಯಮೂರ್ತಿಯು ಸೆಕ್ಷನ್ 302 ಐಪಿಸಿ ಪ್ರಕರಣ ದಲ್ಲಿ ಬಂಧನಕ್ಕೆ ಸೂಕ್ತ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಸೆಷನ್ಸ್ ನ್ಯಾಯಾಧೀಶರು ಇಂತಹ ತಪ್ಪು ಮಾಡಿದರೆ ಅರ್ಥ ಮಾಡಿಕೊಳ್ಳಬಹುದು. ಆದರೆ, ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಈ ರೀತಿ ಹೇಳಿಕೆ ನೀಡುವುದೇ, ಇಂತಹ ತಪ್ಪು ಮಾಡುವುದೇ’ ಎಂದು ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿದೆ.
l* ಅಶ್ಲೀಲ ಸಂದೇಶಗಳನ್ನು ಕಳುಹಿಸಿ ರೇಣುಕಸ್ವಾಮಿ ತಪ್ಪು ಮಾಡಿದ್ದಾರೆ. ಹಾಗೆಂದು ಮಾರಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಆರೋಪಿಗಳ ವಿರುದ್ಧ ಪ್ರಬಲ ಪುರಾವೆಗಳಿವೆ. ಜಾಮೀನು ರದ್ದುಪಡಿಸಬಾರದು ಏಕೆ ಎಂದು ಪೀಠವು ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.