ADVERTISEMENT

ವಿಸ್ತೃತ ಪೀಠಕ್ಕೆ ಬಿ.ಎಸ್‌.ಯಡಿಯೂರಪ್ಪ ಡಿನೋಟಿಫಿಕೇಷನ್‌ ಪ್ರಕರಣ

ಡಿನೋಟಿಫಿಕೇಷನ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 14:15 IST
Last Updated 21 ಏಪ್ರಿಲ್ 2025, 14:15 IST
<div class="paragraphs"><p>ಬಿ.ಎಸ್‌.ಯಡಿಯೂರಪ್ಪ</p></div>

ಬಿ.ಎಸ್‌.ಯಡಿಯೂರಪ್ಪ

   

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ತೀರ್ಪು ಪ್ರಕಟಿಸುವುದರಿಂದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಸೋಮವಾರ ಹಿಂದೆ ಸರಿದಿದೆ. 

2018ರ ಜುಲೈನಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದು ಸೆಕ್ಷನ್ 17ಎ ಸೇರಿಸಲಾಗಿದೆ. ಸಾರ್ವಜನಿಕ ಸೇವಕನ ವಿರುದ್ಧ ಈ ಕಾಯ್ದೆಯ ಅಡಿಯಲ್ಲಿ ವಿಚಾರಣೆ, ತನಿಖೆ ಆರಂಭಿಸಲು ಪೊಲೀಸ್ ಅಧಿಕಾರಿಯು ಸಕ್ಷಮ ಪ್ರಾಧಿಕಾರದಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಈ ಸೆಕ್ಷನ್ ಹೇಳುತ್ತದೆ.

ADVERTISEMENT

‘ಪೂರ್ವಾನುಮತಿಗೆ ಸಂಬಂಧಿಸಿದ ಎರಡು ಪ್ರಕರಣಗಳು ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಬಾಕಿ ಇವೆ. ನ್ಯಾಯಾಂಗ ಶಿಸ್ತು ಮತ್ತು ಔಚಿತ್ಯ ಕಾಪಾಡಿಕೊಳ್ಳುವ ಸಲುವಾಗಿ, ಸೂಕ್ತ ಆದೇಶಗಳಿಗಾಗಿ ಯಡಿಯೂರಪ್ಪ ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡಬೇಕು’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಪೀಠವು ನಿರ್ದೇಶನ ನೀಡಿತು.

ದ್ವಿಸದಸ್ಯ ಪೀಠವು ಏಪ್ರಿಲ್ 4ರಂದು ಬಿಎಸ್‌ವೈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿತ್ತು. ಸಿಆರ್‌ಪಿಸಿ ಸೆಕ್ಷನ್ 156 (3) ಅಡಿಯಲ್ಲಿ ಪ್ರಕರಣದ ತನಿಖೆ ನಡೆದಿದೆಯೇ ಮತ್ತು ಈಗಲೂ ಕೂಡ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 17 ಎ ಅನುಸಾರ ಸೂಕ್ತ ಸರ್ಕಾರಿ ‍ಪ್ರಾಧಿಕಾರಗಳಿಂದ ಪೂರ್ವಾನುಮತಿಯ ಅಗತ್ಯವಿದೆಯೇ ಎಂಬುದು ಸೇರಿದಂತೆ ಹಲವು ಕಾನೂನಾತ್ಮಕ ಪ್ರಶ್ನೆಗಳನ್ನು ನ್ಯಾಯಪೀಠ ಕೇಳಿತ್ತು. 

‌‘ನಾವು ಈ ತೀರ್ಪಿನ ಬಗ್ಗೆ ಕೆಲಸ ಪ್ರಾರಂಭಿಸುವ ಹಂತದಲ್ಲಿದ್ದಾಗ, ಶೆಮಿನ್‌ ಖಾನ್‌ ವರ್ಸಸ್‌ ದೇಬಾಶಿಶ್ ಚಕ್ರವರ್ತಿ ಮತ್ತು ಇತರರು ಪ್ರಕರಣದಲ್ಲಿ 2024ರ ಏಪ್ರಿಲ್‌ 16ರಂದು ನ್ಯಾಯಪೀಠವು ಹೊರಡಿಸಿದ್ದ ಮತ್ತೊಂದು ಆದೇಶವು ಗಮನಕ್ಕೆ ಬಂತು. ಆ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಮಂಜು ಸುರಾನ ವರ್ಸಸ್‌ ಸುನೀಲ್‌ ಅರೊರಾ ಪ್ರಕರಣವನ್ನು 2018ರಲ್ಲೇ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿತ್ತು. ಹೀಗಾಗಿ, ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡುವುದು ಸೂಕ್ತ ಎಂದು ಭಾವಿಸಿದ್ದೇವೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.  

ಯಡಿಯೂರಪ್ಪ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ‘ಯಡಿಯೂರಪ್ಪ ವಿರುದ್ಧ ಈ ಹಿಂದೆ ಎರಡು ದೂರುಗಳಲ್ಲಿ ಉಲ್ಲೇಖಿಸಲಾದ ಸಂಗತಿಗಳು ಮತ್ತು ಸಾಕ್ಷ್ಯಗಳು ಹೆಚ್ಚಾಗಿ ಒಂದೇ ಆಗಿವೆ. ಕರ್ನಾಟಕ ಹೈಕೋರ್ಟ್ 2015ರ ಸಂಬಂಧಿತ ಪ್ರಕರಣವನ್ನು ಅದರ ಅರ್ಹತೆ ಪರಿಶೀಲಿಸದೆ ತಾಂತ್ರಿಕ ಆಧಾರದ ಮೇಲೆ ಪರಿಗಣಿಸಿ ತಪ್ಪು ಮಾಡಿದೆ’ ಎಂದು ವಾದಿಸಿದ್ದರು. 

ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ವಕೀಲರಾದ ವಿಕಾಸ್‌ ಸಿಂಗ್‌, ಆರ್.ಬಸಂತ್‌, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅಮನ್ ಪನ್ವಾರ್, ವಕೀಲ ಡಿ.ಎಲ್‌.ಚಿದಾನಂದ ವಾದ ಮಂಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.