ADVERTISEMENT

ಕನೇರಿ ಸ್ವಾಮೀಜಿಗೆ ಸುಪ್ರೀಂ ಕೋರ್ಟ್‌ ತರಾಟೆ: ಅರ್ಜಿ ವಜಾಗೊಳಿಸಿದ ನ್ಯಾಯಪೀಠ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 15:42 IST
Last Updated 29 ಅಕ್ಟೋಬರ್ 2025, 15:42 IST
<div class="paragraphs"><p>ಕನೇರಿ ಶ್ರೀ</p></div>

ಕನೇರಿ ಶ್ರೀ

   

ನವದೆಹಲಿ: ವಿಜಯಪುರ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ. 

‘ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ನುಡಿಗಳನ್ನು ಆಡಿದ್ದಾರೆ’ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ಡಿಸೆಂಬರ್ 14ರವರೆಗೆ ವಿಜಯಪುರ ಜಿಲ್ಲೆ ಪ್ರವೇಶಿಸಬಾರದು ಎಂದು ವಿಜಯಪುರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಇತ್ತೀಚೆಗೆ ಎತ್ತಿ ಹಿಡಿದಿತ್ತು. 

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್‌ ಹಾಗೂ ಪ್ರಸನ್ನ ಬಿ.ವರಾಲೆ ಪೀಠವು ಸ್ವಾಮೀಜಿ ಅವರನ್ನು ತರಾಟೆಗೆ ತೆಗೆದುಕೊಂಡಿತು. ‘ಕೀಳು ಮಟ್ಟದ ಹೇಳಿಕೆ ನೀಡಿರುವ ನೀವು ಉತ್ತಮ ನಾಗರಿಕರಲ್ಲ‘ ಎಂದು ಕಟುವಾಗಿ ಹೇಳಿತು. 

‘ಹೇಳಿಕೆ ನೀಡುವಾಗ ಸ್ವಾಮೀಜಿ ಜಾಗರೂಕರಾಗಿರಬೇಕು. ನಿಮ್ಮ ಇಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಹೈಕೋರ್ಟ್‌ ಆದೇಶದಲ್ಲಿ ತಪ್ಪೇನಿದೆ‘ ಎಂದು ಪೀಠ ಪ್ರಶ್ನಿಸಿತು. ‘ನೀವು ಹೀಗೆಯೇ ವರ್ತಿಸುತ್ತಿದ್ದರೆ ಎಲ್ಲ ಜಿಲ್ಲಾಧಿಕಾರಿಗಳು ಇಂತಹ ಆದೇಶಗಳನ್ನು ಹೊರಡಿಸುತ್ತಾರೆ‘ ಎಂದು ಪೀಠ ಸೂಚ್ಯವಾಗಿ ಹೇಳಿತು. 

‘ಪ್ರಕರಣದ ವಾಸ್ತವಾಂಶ ಹಾಗೂ ಸನ್ನಿವೇಶಗಳನ್ನು ಗಮನಿಸಿದರೆ, ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸಲು ನಾವು ಒಲವು ತೋರುವುದಿಲ್ಲ. ಡಿಸೆಂಬರ್‌ 14ರ ನಂತರ ಸ್ವಾಮೀಜಿ ಅವರು ಜಿಲ್ಲೆ ಪ್ರವೇಶಿಸಬಹುದು‘ ಎಂದು ಪೀಠ ಸ್ಪಷ್ಟಪಡಿಸಿತು. 

‘ಗಡಿಪಾರು ಮಾಡಲೂ ಅಧಿಕಾರ ಇದೆ’

‘ಸ್ವಾಮೀಜಿ ಯಾವುದೇ ಹಿಂಸಾಚಾರಕ್ಕೆ ‍ಪ್ರಚೋದನೆ ನೀಡಿಲ್ಲ. ರಾಜ್ಯದಲ್ಲಿನ ಕೆಲವು ಲಿಂಗಾಯತ ಧಾರ್ಮಿಕ ನಾಯಕರ ಸೂಚನೆ ಮೇರೆಗೆ ಸ್ವಾಮೀಜಿ ಅವರ ವಿಜಯಪುರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಂತಹ ನಾಯಕರು ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ’ ಎಂದು ಸ್ವಾಮೀಜಿ ಪರ ವಕೀಲರು ವಾದಿಸಿದರು. ಹೈಕೋರ್ಟ್‌ನ ಆದೇಶ ದೋಷಪೂರಿತವಾಗಿದೆ ಎಂದೂ ದೂರಿದರು. 

ಸ್ವಾಮೀಜಿ ಅವರನ್ನು ಎಲ್ಲ ಜಿಲ್ಲೆಗಳಿಂದ ಗಡಿಪಾರು ಮಾಡಲು ರಾಜ್ಯದ ಅಧಿಕಾರಿಗಳು ಬಯಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ‘ನಿಮ್ಮ ಕೃತ್ಯಗಳು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದರೆ, ಜಿಲ್ಲಾಧಿಕಾರಿ ಅಥವಾ ಆಯುಕ್ತರಿಗೆ ನಿಮ್ಮನ್ನು ಗಡಿಪಾರು ಮಾಡಲು ಅಧಿಕಾರವಿದೆ’ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು. ‘ನೀವು ಜಿಲ್ಲೆಯನ್ನು ಪ್ರವೇಶಿಸಬೇಕು ಎಂದು ಏಕೆ ಒತ್ತಾಯಿ ಸುತ್ತೀರಿ? ಭಾರತವು ತುಂಬಾ ದೊಡ್ಡ ದೇಶ. ನೀವು ಬೇರೆಡೆಗೆ ಹೋಗಿ’ ಎಂದು ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಘವೇಂದ್ರ ಶ್ರೀವಾಸ್ತವ ಅವರನ್ನು ಪೀಠ ಕೇಳಿತು.

ಪ್ರಕರಣವೇನು?: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪ್ರಸಿದ್ಧ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಅಕ್ಟೋಬರ್ 7ರಂದು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರು ಗ್ರಾಮದ ಸಮಾರಂಭವೊಂದರಲ್ಲಿ ಮಾತನಾಡಿದ್ದರು.

ಈ ವೇಳೆ ಅವರು, ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು, ಕಲಾವಿದರಿಂದ ಕೂಡಿದ ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಮಂಡಳಿ. ಇವರು ಬಸವ ಸಂಸ್ಕೃತಿ ಅಭಿಯಾನ ಎಂಬ ನಾಟಕವನ್ನು ತೆಗೆದುಕೊಂಡು ಕರ್ನಾಟಕದಾದ್ಯಂತ ತಿರುಗಾಡಿ; ದೇವರು ಗುಡ್ಯಾಗ ಇಲ್ಲ. ಗುಡೀಗೆ ಹೋಗಬ್ಯಾಡ್ರಿ, ಮನ್ಯಾಗಿನ ದೇವರುಗಳನ್ನು ತಗೊಂಡು ಹೊಳ್ಯಾಗ ಹಾಕ್ರಿ. ಹೋಟೆಲ್‌ದಾಗ ಹೋಗಿ ದಾರು ಕುಡೀರಿ. ಆರಾಮಾಗಿರಿ, ಮಾಂಸ ತಿನ್ರಿ... ಎಂದೆಲ್ಲಾ ಜನರಿಗೆ ಹೇಳುತ್ತಿದ್ದಾರೆ’ ಎಂದು ಆಕ್ಷೇಪಿಸಿದ್ದರು.

ಲಿಂಗಾಯತ ಮಠಾಧಿಪತಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಬಳಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದ್ದಾರೆ ಎಂಬ ಕಾರಣಕ್ಕೆ ವಿಜಯಪುರ ಜಿಲ್ಲಾಧಿಕಾರಿ ಅವರು ಸ್ವಾಮೀಜಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.