ADVERTISEMENT

ಸಿ.ಟಿ. ರವಿ ಪ್ರಕರಣ: ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:36 IST
Last Updated 19 ಮೇ 2025, 14:36 IST
<div class="paragraphs"><p>ಸಿ.ಟಿ. ರವಿ ಹಾಗೂ&nbsp;ಲಕ್ಷ್ಮಿ ಹೆಬ್ಬಾಳಕರ</p></div>

ಸಿ.ಟಿ. ರವಿ ಹಾಗೂ ಲಕ್ಷ್ಮಿ ಹೆಬ್ಬಾಳಕರ

   

ನವದೆಹಲಿ: ‘ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಅಶ್ಲೀಲ ಪದಬಳಕೆ ಮೂಲಕ ನಿಂದಿಸಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ. 

ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ  ಹೈಕೋರ್ಟ್‌ ಆದೇಶ ಪ್ರಶ್ನಿಸಿ ರವಿ ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. 

ADVERTISEMENT

ರವಿ ಅರ್ಜಿ ವಜಾಗೊಳಿಸಿ ಮೇ 2ರಂದು ತೀರ್ಪು ನೀಡಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ‘ಸದನದಲ್ಲಿ ಬಳಕೆ ಮಾಡಿದ್ದಾರೆ ಎಂಬ ಆರೋಪಿತ ಪದಗಳ ಬಗ್ಗೆ ಅಪರಾಧಿಕ ಪ್ರಾಸಿಕ್ಯೂಷನ್‌ ಮುಖಾಂತರ; ಶಾಸಕರಿಗೆ ಇರುವ ವಿನಾಯಿತಿಯ ಅಡಿಯಲ್ಲಿ ರಕ್ಷಣೆ ನೀಡಲು ಆಗುವುದಿಲ್ಲ. ಆರೋಪಿತ ಪದವನ್ನು ಬಳಕೆ ಮಾಡಿದ್ದರೆ ಅಥವಾ ಅಂತಹ ನಡತೆ ಪ್ರದರ್ಶಿಸಿದ್ದರೆ ಅದು ಮಹಿಳೆಯ ಘನತೆಗೆ ಹಾನಿ ಉಂಟು ಮಾಡುವಂತಹುದು’ ಎಂದು ಅಭಿಪ್ರಾಯಪಟ್ಟಿದ್ದರು.

ಪ್ರಕರಣವೇನು?:

‘ನನ್ನ ವಿರುದ್ಧ ಅಶ್ಲೀಲ ಪದಬಳಕೆ ಮಾಡಿದ್ದಾರೆ’ ಎಂದು ಆರೋಪಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಬಾಗೇವಾಡಿ ಪೊಲೀಸರು 2024ರ ಡಿಸೆಂಬರ್ 19ರಂದು ಸಿ.ಟಿ.ರವಿ ವಿರುದ್ಧ ಭಾರತೀಯ ನ್ಯಾಯಸಂಹಿತೆ–2023ರ ಕಲಂ 75 (ಲೈಂಗಿಕ ಕಿರುಕುಳ) ಮತ್ತು 79ರ (ಮಹಿಳೆಯ ಘನತೆಗೆ ಹಾನಿ) ಅಡಿಯಲ್ಲಿ ಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧದ ನ್ಯಾಯಿಕ ಪ್ರಕ್ರಿಯೆ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.

‘2024ರ ಡಿಸೆಂಬರ್‌ 19ರಂದು ವಿಧಾನ ಪರಿಷತ್‌ನ ಕಲಾಪದ ಸಂದರ್ಭದಲ್ಲಿ ನಾನು ಹೇಳಿಕೆ ನೀಡಿದ್ದೆ. ಕ್ರಿಮಿನಲ್ ತನಿಖೆ ಪ್ರಾರಂಭಿಸುವುದು ಮತ್ತು ಮುಂದುವರಿಸುವುದು 194(2) ನೇ ವಿಧಿಯ ಅಡಿಯಲ್ಲಿ ನೀಡಲಾದ ಸಾಂವಿಧಾನಿಕ ರಕ್ಷಣೆಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ’ ಎಂದು ರವಿ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.  

‘ಸೆಕ್ಷನ್ 135ಎ ಪ್ರಕಾರ, ಅಧಿವೇಶನಗಳ ಸಮಯದಲ್ಲಿ ಮತ್ತು ಅಧಿವೇಶನಗಳ ನಂತರವೂ 40 ದಿನಗಳವರೆಗೆ ಸದಸ್ಯರನ್ನು ಬಂಧಿಸುವಂತಿಲ್ಲ’ ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.