ADVERTISEMENT

ಕೋಲಾರಕ್ಕೆ ಇಲ್ಲ ರೈಲು ಬೋಗಿ ಕಾರ್ಖಾನೆ: ಅಂಗಡಿ

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 19:45 IST
Last Updated 8 ಫೆಬ್ರುವರಿ 2020, 19:45 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಬೆಂಗಳೂರು: ‘ರೈಲು ಬೋಗಿಗಳಿಗೆ ದೇಶದಲ್ಲಿ ಬೇಡಿಕೆ ಇಲ್ಲ. ಹೀಗಾಗಿ ಕೋಲಾರದಲ್ಲಿ ಬೋಗಿ ತಯಾರಿಕಾ ಕಾರ್ಖಾನೆ ಬದಲು ರೈಲು ದುರಸ್ತಿ ಕಾರ್ಯಾಗಾರ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸ್ಪಷ್ಟಪಡಿಸಿದರು.

‘ಕೋಲಾರದಲ್ಲಿ ಬೋಗಿ ಕಾರ್ಖಾನೆ ಆರಂಭಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ರೈಲು ಬೋಗಿಗಳ ತಯಾರಿಕೆ ಹೆಚ್ಚಿದ್ದು, ಬೇಡಿಕೆ ಕಡಿಮೆ ಇದೆ. ಹೀಗಿರುವಾಗ ಮತ್ತೊಂದು ಕಾರ್ಖಾನೆ ಆರಂಭಿಸುವ ಅಗತ್ಯವಿಲ್ಲ. ವಿದೇಶಗಳಿಂದ ಬೋಗಿಗಳಿಗೆ ಬೇಡಿಕೆ ಬಂದರೆ ನಂತರದ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕಾರ್ಯಾಗಾರ ಆರಂಭಿಸುವುದರಿಂದ ಬೋಗಿಗಳ ದುರಸ್ತಿಗೆ ಅನುಕೂಲವಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯರು. ಬೋಗಿ ಕಾರ್ಖಾನೆ ಮತ್ತು ಉಪನಗರ ರೈಲು ಯೋಜನೆ ಬಗ್ಗೆ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ADVERTISEMENT

‘2023ರ ವೇಳೆಗೆ ಎಲ್ಲ ರೈಲು ಮಾರ್ಗಗಳನ್ನು ವಿದ್ಯುದೀಕರಣಗೊಳಿಸುವ ಗುರಿ ಇದೆ. ದೇಶದಲ್ಲಿ 64,298 ಕಿ.ಮೀ. ಮಾರ್ಗದ ಪೈಕಿ 37,942 ಕಿ.ಮೀ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ‌‌’ ಎಂದು ವಿವರಿಸಿದರು.

ಕಾರ್ಖಾನೆ ಬದಲಿಸಲು ಬಿಡಲಾರೆ: ಖರ್ಗೆ

‘ರೈಲ್ವೆ ಸಚಿವನಾಗಿದ್ದಾಗಕೋಲಾರಕ್ಕೆ ಬೋಗಿ ತಯಾರಿಕಾ ಕಾರ್ಖಾನೆ ತಂದಿದ್ದು ನಾನು. ನನ್ನ ಮತ ಕ್ಷೇತ್ರದ ಕಾರ್ಯಕ್ರಮಕ್ಕೂ ಗೈರಾಗಿ ಕೋಲಾರಕ್ಕಾಗಿ ಸಂಪುಟ ಸಭೆಯಲ್ಲಿ ಹಾಜರಾಗಿದ್ದೆ. ಈಗ ಅದನ್ನು ಬದಲಿಸುತ್ತಿರುವುದುಸರಿಯಲ್ಲ, ಇದಕ್ಕೆ ನನ್ನ ವಿರೋಧ ಇದೆ’ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ನಾನು ರಾಜ್ಯಕ್ಕೆ ಹೆಚ್ಚು ಅನುದಾನ ತಂದು ಕೊಟ್ಟಿದ್ದೇನೆ. ಆದರೆ, ಯುಪಿಎ ಸರ್ಕಾರ ಮಾಡಿರುವ ಯೋಜನೆಯನ್ನೇ ತಡೆಯುವುದಕ್ಕೆಹೊರಟಿದ್ದಾರೆ.ಹೊಸ ಯೋಜನೆ ಮಾಡುವ ಸಾಮರ್ಥ್ಯ ಇಲ್ಲ, ಹಳೆಯದನ್ನು ಮುಂದುವರಿಸುವ ಆಸಕ್ತಿಯೂ ಈ ಸರ್ಕಾರಕ್ಕೆ ಇಲ್ಲ’ ಎಂದು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ಬೆಂಗಳೂರು ಉಪನಗರ ರೈಲು ಯೋಜನೆ ಒಂದು ಕೋಟಿ ಟೋಕನ್ ಹಣ ಕೊಟ್ಟಿದ್ದಾರೆ. ಈ ದುಡ್ಡಿನಿಂದಸರ್ವೆ ಮಾಡುವುದಕ್ಕೂ ಆಗುವುದಿಲ್ಲ’ ಎಂದು ಕುಟುಕಿದರು.

ಸಂಸದರ ಸಲಹೆಯಂತೆ ಕ್ರಮ?

ದೇಶದಲ್ಲಿರುವ ಕೆಲವು ಕೋಚ್‌ ಫ್ಯಾಕ್ಟರಿಗಳಲ್ಲಿ ಬೇಡಿಕೆ ಇಲ್ಲದೆ ಬೋಗಿಗಳ ಉತ್ಪಾದನೆಯೇ ಸ್ಥಗಿತಗೊಂಡಿದೆ. ಹೀಗಾಗಿ ಕೋಲಾರದಲ್ಲಿ ಕೋಚ್‌ ಫ್ಯಾಕ್ಟರಿ ಬದಲಿಗೆ ದುರಸ್ತಿ ಕೇಂದ್ರ ಸ್ಥಾಪಿಸಬಹುದು, ಅದರಿಂದ ಒಂದಿಷ್ಟು ಉದ್ಯೋಗವಾದರೂ ದೊರೆತೀತು ಎಂದು ಕೆಲವು ತಿಂಗಳ ಹಿಂದೆ ಕೋಲಾರದ ಹಾಲಿ ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದ್ದರು. ಈ ಸಲಹೆಯನ್ನು ಬಜೆಟ್‌ನಲ್ಲಿ ಪರಿಗಣಿಸಲಾಗಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.