ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದವರು ಇಷ್ಟಪಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಬಿಜೆಪಿಯ ಎಸ್.ಸುರೇಶ್‌ಕುಮಾರ್ ಹೇಳಿದರು.
ಶಾಲೆಗಳ ಸ್ಥಿತಿಗತಿ ಮತ್ತು ಸುಧಾರಣೆಯ ಕುರಿತು ವಿಧಾನಸಭೆಯಲ್ಲಿ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಪಕ್ಷಾತೀತವಾಗಿ ಕೈಜೋಡಿಸಬೇಕು’ ಎಂದರು.
‘ಸರ್ಕಾರಿ ಶಾಲೆಗಳಲ್ಲಿ ಉತ್ತಮ ತರಬೇತಿ ಪಡೆದ ಅತ್ಯುತ್ತಮ ಶಿಕ್ಷಕರು ಇದ್ದಾರೆ. ಶೈಕ್ಷಣಿಕ ವಾತಾವರಣವೂ ಇದೆ. ಆದರೆ ಸರ್ಕಾರಿ ಶಾಲೆ ಎಂದರೆ ಸಾಕಷ್ಟು ಜನರಲ್ಲಿ ಕೀಳರಿಮೆ ಇದೆ. ಇದನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮದು. ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕು ಎಂಬ ಮನೋಭಾವನೆ ಪೋಷಕರಲ್ಲಿ ಬರಬೇಕು. ಅದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕಾಗಿದೆ’ ಎಂದು ಹೇಳಿದರು.
‘ವಿವಿಧ ರಾಜ್ಯಗಳ ಅತ್ಯುತ್ತಮ ಮಾದರಿಗಳನ್ನು ನಾವು ಅಳವಡಿಸಿಕೊಳ್ಳಬೇಕು. ಕೇರಳದಲ್ಲಿ ಸರ್ಕಾರಿ ಶಾಲೆಗಳಿಗೆ ಮೊದಲ ಆದ್ಯತೆ ಎಂಬ ವಾತಾವರಣವಿದೆ. ಅದನ್ನು ನಾವು ಅಳವಡಿಸಿಕೊಳ್ಳಬೇಕು. ಮುಂದಿನ ಎರಡು ವರ್ಷಗಳನ್ನು ‘ಗುಣಮಟ್ಟದ ಶಿಕ್ಷಣದ ವರ್ಷ’ ಎಂದು ರಾಜ್ಯ ಸರ್ಕಾರ ಘೋಷಿಸಬೇಕು. ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
‘ಜನಗಣತಿ, ಚುನಾವಣೆ, ಮಧ್ಯಾಹ್ನದ ಬಿಸಿ ಊಟ ತಯಾರಿಕೆಗೆ ಶಾಲಾ ಸಿಬ್ಬಂದಿಯನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಈ ರೀತಿ ಬಳಸಿಕೊಳ್ಳುವುದರಿಂದ ಶಿಕ್ಷಣದ ಗುಣಮಟ್ಟ ಕುಸಿತವಾಗುತ್ತದೆ’ ಎಂದರು.
ರಾಜ್ಯದಲ್ಲಿ 1.80 ಲಕ್ಷ ಸರ್ಕಾರಿ ಶಿಕ್ಷಕರಿದ್ದಾರೆ. ಅವರಿಗೆ ಪ್ರೇರೇಪಣೆ ನೀಡುವ ಕೆಲಸ ಆಗಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪೂರ್ಣ ಪ್ರಮಾಣದ ಶಾಲೆ ಸ್ಥಾಪಿಸಬೇಕು
ಪಠ್ಯೇತರ ಚಟುವಟಿಕೆಗಳಾದ ಕಲೆ, ಕ್ರೀಡೆಗಳಿಗೂ ಶಿಕ್ಷಕರ ನೇಮಕಾತಿ ಆಗಬೇಕು
ಪ್ರತಿಯೊಬ್ಬ ಶಾಸಕ ವಾರಕ್ಕೊಮ್ಮೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಉತ್ತಮ ಕೆಲಸ ಮಾಡುವ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕು
ಸರ್ಕಾರಿ ಶಾಲೆಗಳಿಗಿರುವ ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಮತ್ತು ಸವಾಲುಗಳ ಬಗ್ಗೆ ವಿಶ್ಲೇಷಣೆ ನಡೆಸಬೇಕು
ಸರ್ಕಾರಿ ಶಾಲೆಗಳಿಗೆಂದು ದಾನಿಗಳು ನೀಡಿರುವ ಆಸ್ತಿಗಳನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.