ADVERTISEMENT

ತರಾತುರಿಯಲ್ಲಿ ಶಾಲೆ ತೆರೆಯುವುದಿಲ್ಲ: ಸುರೇಶ್‌ಕುಮಾರ್‌

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ವಿಧಾನ ಪರಿಷತ್ ಸದಸ್ಯರ ಒಲವು

​ಪ್ರಜಾವಾಣಿ ವಾರ್ತೆ
Published 16 ಮೇ 2020, 20:15 IST
Last Updated 16 ಮೇ 2020, 20:15 IST
ಸಚಿವ ಎಸ್‌. ಸುರೇಶ್‌ ಕುಮಾರ್‌
ಸಚಿವ ಎಸ್‌. ಸುರೇಶ್‌ ಕುಮಾರ್‌    

ಬೆಂಗಳೂರು: ‘ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ಸರ್ಕಾರಕ್ಕಿದೆ. ಹೀಗಾಗಿ ತರಾತುರಿಯಲ್ಲಿ ಶಾಲೆಗಳನ್ನು ತೆರೆಯುವುದಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಎರಡು ಪಾಳಿಗಳಲ್ಲಿ ತರಗತಿ ನಡೆಸುವ ಬಗ್ಗೆ ಇಲಾಖೆ ನಡೆಸುತ್ತಿರುವ ಸಿದ್ಧತೆ ಆಧರಿಸಿ ಜೂನ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆರಂಭವಾಗಲಿದೆ ಎಂಬ ಸುದ್ದಿ ಹರದಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವ್ಯಾಪಕ ಪ್ರಚಾರವೂ ಸಿಕ್ಕಿತ್ತು.

ಈ ಬೆಳವಣಿಗೆಯಿಂದ ಕಂಗಾಲಾಗಿದ್ದ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದನ್ನು ಸಚಿವರ ಗಮನಕ್ಕೂ ತಂದಿದ್ದರು. ಅದರ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ಪಾಳಿಯಲ್ಲಿ ಶಾಲೆ ನಡೆಸುವ ಸಂಬಂಧ ಶುಕ್ರವಾರ ನೀಡಲಾದ ಟಿಪ್ಪಣಿ ಇಲಾಖೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಾಗಿ ತಯಾರಿಸಿದ ಮಾಹಿತಿಯಷ್ಟೇ. ಅದು ಅಧಿಕೃತ ಸುತ್ತೋಲೆ ಅಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರೂ ಸ್ಪಷ್ಟನೆ ನೀಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಲವು: ಸಚಿವ ಸುರೇಶ್‌ ಕುಮಾರ್ ಅವರು ಶನಿವಾರ ವಿಧಾನ ಪರಿಷತ್‌ನ ಶಿಕ್ಷಕ–ಪದವೀಧರ ಕ್ಷೇತ್ರದ ಶಾಸಕರೊಂದಿಗೆ ವಿಡಿಯೊ ಸಂವಾದ ನಡೆಸಿದರು. ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುದು ಪ್ರಮುಖ ಘಟ್ಟ. ಆ ಪರೀಕ್ಷೆ ನಡೆಯಲೇಬೇಕು’ ಎಂದು ಬಹುತೇಕರು ಹೇಳಿದರು.

ಕೊರೊನಾ ಭೀತಿ ಕಡಿಮೆಯಾದ ಬಳಿಕ ತರಗತಿಗಳನ್ನು ನಡೆಸುವ ಬಗೆ, ಅಂತರ ಕಾಯ್ದುಕೊಳ್ಳುವಿಕೆ, ಪಾಳಿಯಲ್ಲಿ ತರಗತಿ, ಪಿಯು ಪಠ್ಯ ಕಡಿತ ಮಾಡಿದರೆ ಆಗಬಹುದಾದ ತೊಂದರೆಗಳು ಸಹಿತ ಹಲವಾರು ವಿಷಯಗಳ ಬಗ್ಗೆ ಸಲಹೆಗಳು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.