ಬೆಂಗಳೂರು: ಕೆಲವು ಶಾಸಕರು ವ್ಯಕ್ತಪಡಿಸಿದ್ದ ಅಸಮಾಧಾನ, ಆರೋಪಗಳನ್ನು 11 ಸಚಿವರ ಜೊತೆ ಮಂಗಳವಾರ ಹಂಚಿಕೊಂಡ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.
ಸಚಿವರಾದ ಸತೀಶ ಜಾರಕಿಹೊಳಿ, ಎಸ್.ಎಸ್. ಮಲ್ಲಿಕಾರ್ಜುನ್, ಮಧು ಬಂಗಾರಪ್ಪ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳಕರ, ಶರಣಪ್ರಕಾಶ್ ಪಾಟೀಲ, ಎನ್.ಎಸ್. ಬೋಸರಾಜು, ಸಂತೋಷ್ ಲಾಡ್, ಕೆ. ವೆಂಕಟೇಶ್, ಡಿ. ಸುಧಾಕರ್ ಜೊತೆ ಸುರ್ಜೇವಾಲಾ ಚರ್ಚೆ ನಡೆಸಿದರು. ಇಲಾಖೆಗಳ ಕಾರ್ಯವೈಖರಿ, ಹೊಸ ಯೋಜನೆಗಳು, ಶಾಸಕರ ಆರೋಪಗಳ ಕುರಿತು ಸಚಿವರ ಜೊತೆ ವಿಚಾರ ವಿನಿಮಯ ನಡೆಸಿದರು.
ಶಾಸಕರಾದ ಶರತ್ ಬಚ್ಚೇಗೌಡ, ಖನೀಜ್ ಫಾತಿಮಾ ಮತ್ತು ಪಿ.ಎಂ. ನರೇಂದ್ರಸ್ವಾಮಿ ಕೂಡಾ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದರು.
ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸತೀಶ ಜಾರಕಿಹೊಳಿ, ‘ಶಾಸಕರು ಆರೋಪ ಮಾಡಿದ ಕಾರಣಕ್ಕೆ ಸಚಿವರ ಜೊತೆ ಅವರು ಸಭೆ ನಡೆಸಿದ್ದಾರೆ. ನಮ್ಮ ಇಲಾಖೆಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದ್ದೇವೆ. ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಕೊಟ್ಟಿದ್ದೇವೆ ಎಂದೂ ತಿಳಿಸಿದ್ದೇವೆ. ಶಾಸಕರ ಒಂದೆರಡು ಬೇಡಿಕೆಗಳನ್ನು ಮಾಡಿಲ್ಲ ಅಷ್ಟೆ. ನಮ್ಮನ್ನು ಅವರು ಮೌಲ್ಯಮಾಪನ ಮಾಡಿಲ್ಲ’ ಎಂದರು.
‘ನಮ್ಮ ತಪ್ಪುಗಳನ್ನು ಹೇಳಿದರೆ ಅಲ್ಲವೇ ಗೊತ್ತಾಗುವುದು. ಕೆಲವು ಶಾಸಕರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಅದನ್ನು ತಡೆಯಬೇಕಲ್ಲವೇ. ಕ್ಯಾನ್ಸರ್ ಬರುವ ಮೊದಲೇ ಎಚ್ಚೆತ್ತುಕೊಳ್ಳಬೇಕಲ್ಲವೇ’ ಎಂದೂ ಹೇಳಿದರು.
‘ಎರಡು ವರ್ಷಗಳ ಸಾಧನೆ ಬಗ್ಗೆ ಸುರ್ಜೇವಾಲಾ ಅವರಿಗೆ ವಿವರಿಸಿದ್ದೇನೆ. ಇಲಾಖೆಯ ಹೊಸ ಯೋಜನೆ ಬಗ್ಗೆಯೂ ಅವರಿಗೆ ಮಾಹಿತಿ ನೀಡಿದ್ದೇನೆ. ಕೆಲವು ಶಾಸಕರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಿತು’ ಎಂದು ಸಂತೋಷ್ ಲಾಡ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.