ಬೆಂಗಳೂರು: ‘ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯನ್ನು ಮುನ್ನಡೆಸುವ ಜವಾಬ್ದಾರಿ ನೀಡಿರುವುದು ಗಂಭೀರ ವಿಚಾರ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಜೂನ್ ತಿಂಗಳಲ್ಲಿ ‘ತಾಲಿಬಾನ್ ಸ್ಯಾಂಕ್ಷನ್ ಸಮಿತಿ’ಯ ಅಧ್ಯಕ್ಷ ಸ್ಥಾನವನ್ನು ಪಾಕಿಸ್ತಾನ ಅಲಂಕರಿಸಿತ್ತು. ದೇಶ ವಿದೇಶಗಳನ್ನು ಸುತ್ತುವ ವಿದೇಶಾಂಗ ಸಚಿವರೇ, ಮೋದಿಯವರೇ ನಿಮ್ಮ ವಿದೇಶ ಪ್ರವಾಸದ ಫಲ ಇದೇ ಏನು’ ಎಂದು ಅವರು ಪ್ರಶ್ನಿಸಿದರು.
‘ಪಹಲ್ಗಾಮ್ ದಾಳಿ ನಡೆದ ಹೊತ್ತಿನಲ್ಲೇ ವಿಶ್ವ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಪಾಕಿಸ್ತಾನಕ್ಕೆ ಭಾರಿ ಮೊತ್ತದ ಸಾಲ ಸಿಕ್ಕಿದೆ. ಶ್ರೀಲಂಕಾ, ಬಾಂಗ್ಲಾ, ನೇಪಾಳ, ಮಾಲ್ದೀವ್ಸ್ ಸೇರಿದಂತೆ ಸಣ್ಣ ರಾಷ್ಟ್ರಗಳೂ ಭಾರತದ ಬೆಂಬಲಕ್ಕೆ ನಿಲ್ಲಲಿಲ್ಲ. ಮೋದಿಯವರು ₹8 ಸಾವಿರ ಕೋಟಿಯ ಜೆಟ್‌ನಲ್ಲಿ ಇಡೀ ಪ್ರಪಂಚ ಸುತ್ತುತ್ತಾರೆ. ಅವರು ಕಳೆದ 10 ವರ್ಷಗಳಲ್ಲಿ ₹10 ಸಾವಿರ ಕೋಟಿಯನ್ನು ವಿದೇಶ ಪ್ರವಾಸಕ್ಕೆ ಖರ್ಚು ಮಾಡಿದ್ದು ಯಾರ ಉದ್ಧಾರಕ್ಕೆ’ ಎಂದೂ ಕೇಳಿದರು.
‘ಪಾಕಿಸ್ತಾನ ಪ್ರಣೀತ ಪಹಲ್ಗಾಮ್ ದಾಳಿಯ ಘಟನೆ ಹಸಿಯಾಗಿ ಇರುವಾಗಲೇ ಇಂತಹ ಸ್ಥಾನಮಾನ ಪಾಕಿಸ್ತಾನಕ್ಕೆ ದೊರೆತಿರುವುದು ಭಾರತಕ್ಕೆ ಅವಮಾನಕರ. ರಾಕ್ಷಸನೊಬ್ಬನಿಗೆ ಖುರ್ಚಿ ನೀಡಿದಂತಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವಿಶ್ವಮಟ್ಟದಲ್ಲಿ ಇದು ಭಾರಿ ಹಿನ್ನಡೆ. ನಮ್ಮ ವಿದೇಶಾಂಗ ನೀತಿಗಳ ವೈಫಲ್ಯ. ದೇಶದ ಹಿತಕ್ಕೆ ಮಾರಕವಾದ ಸಂಗತಿ’ ಎಂದು ಅಭಿಪ್ರಾಯಪಟ್ಟರು.
‘ಕೇಂದ್ರದಲ್ಲಿ ಯುಪಿಎ ಸರ್ಕಾರಕ್ಕೆ ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಇತ್ತು. ಆ ರಾಷ್ಟ್ರಗಳು ಸಹಕಾರ ನೀಡುತ್ತಿದ್ದವು. ಆದರೆ, ಪಹಲ್ಗಾಮ್ ದಾಳಿ ವೇಳೆ ಯಾರೂ ಬೆಂಬಲಕ್ಕೆ ಬರಲಿಲ್ಲ. ಉಗ್ರವಾದವನ್ನು ಖಂಡಿಸಲಿಲ್ಲ’ ಎಂದು ಸುರ್ಜೇವಾಲಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.