ADVERTISEMENT

ಕುಂದಿದ ಮಾಧ್ಯಮದ ಕಣ್ಗಾವಲು ಶಕ್ತಿ: ಹಿರಿಯ ಪತ್ರಕರ್ತ ‍ಪಿ.ಸಾಯಿನಾಥ್ ಕಳವಳ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 17:17 IST
Last Updated 8 ಡಿಸೆಂಬರ್ 2018, 17:17 IST
ಬಂಡಾಯ ಸಾಹಿತ್ಯ ಸಂಘಟನೆಯ ಲಾಂಛನಕ್ಕೆ ಬಣ್ಣ ತುಂಬುವ ಮೂಲಕ ಪಿ.ಸಾಯಿನಾಥ್ ಅವರು ಕಾರ್ಯಾಗಾರ ಉದ್ಘಾಟಿಸಿದರು. ಪ್ರೊ.ಬರಗೂರು ರಾಮಚಂದ್ರಪ್ಪ, ನಾಗಭೂಷಣ ಬಗ್ಗನಡು, ಸುಕನ್ಯಾ ಮಾರುತಿ, ರಾಜಪ್ಪ ದಳವಾಯಿ, ಓ.ನಾಗರಾಜು, ಕೆ.ದೊರೈರಾಜ್, ಜಿ.ಎಂ.ಶ್ರೀನಿವಾಸಯ್ಯ ಇದ್ದರು
ಬಂಡಾಯ ಸಾಹಿತ್ಯ ಸಂಘಟನೆಯ ಲಾಂಛನಕ್ಕೆ ಬಣ್ಣ ತುಂಬುವ ಮೂಲಕ ಪಿ.ಸಾಯಿನಾಥ್ ಅವರು ಕಾರ್ಯಾಗಾರ ಉದ್ಘಾಟಿಸಿದರು. ಪ್ರೊ.ಬರಗೂರು ರಾಮಚಂದ್ರಪ್ಪ, ನಾಗಭೂಷಣ ಬಗ್ಗನಡು, ಸುಕನ್ಯಾ ಮಾರುತಿ, ರಾಜಪ್ಪ ದಳವಾಯಿ, ಓ.ನಾಗರಾಜು, ಕೆ.ದೊರೈರಾಜ್, ಜಿ.ಎಂ.ಶ್ರೀನಿವಾಸಯ್ಯ ಇದ್ದರು   

ತುಮಕೂರು: ‘ಕಾರ್ಪೊರೇಟ್ ವ್ಯವಸ್ಥೆಯ ಹಿಡಿತಕ್ಕೆ ಮಾಧ್ಯಮ ಕ್ಷೇತ್ರ ಸಿಲುಕಿದ ಪರಿಣಾಮ ಅದರ ಸಂವೇದನೆ ಮತ್ತು ಕಣ್ಗಾವಲು ಶಕ್ತಿ ಕುಂದಿದೆ’ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ಧ ‘ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಮಾಧ್ಯಮಗಳಿಗೆ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಸಾಧ್ಯವಾಗುತ್ತಿಲ್ಲ. ಸಿನಿಮಾ ನಟರ ಮದುವೆ, ಆರತಕ್ಷತೆಯ ಸುದ್ದಿಗಳೇ ಆದ್ಯತೆಯ ವಿಷಯಗಳಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮಳೆ, ಬೆಳೆ ಇಲ್ಲದೆ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಹೀಗೆ ಹತ್ತಾರು ಸಮಸ್ಯೆಗಳಿವೆ. ಆದರೆ, ಇವುಗಳನ್ನು ಮಾಧ್ಯಮಗಳು ಗಂಭೀರವಾಗಿಯೇ ಪರಿಗಣಿಸಿಲ್ಲ. ತಮಗೂ ಸಮಸ್ಯೆಗಳಿಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿವೆ’ ಎಂದು ಹೇಳಿದರು.

‘ಮಹಾನಗರ, ಸಿನಿಮಾ, ಕಾರ್ಪೊರೇಟ್ ವಲಯದ ವಿಷಯಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿವೆ. ರಾಜಕೀಯದವರ ಹಿಡಿತಕ್ಕೆ ಸಿಲುಕಿ ಪೂರ್ಣ ವ್ಯಾಪಾರಿ ಮನೋಧರ್ಮ ರೂಢಿಸಿಕೊಂಡಿವೆ’ ಎಂದು ಆತಂಕ
ವ್ಯಕ್ತಪಡಿಸಿದರು.

ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಬಂಡಾಯ ಎಂಬುದು ಬದಲಾವಣೆಯ ಭಾಷೆಯೇ ಹೊರತು ಬಲಿಯ ಭಾಷೆಯಲ್ಲ’ ಎಂದು ಹೇಳಿದರು.

‘ಯುವಕರನ್ನು ಸೈದ್ಧಾಂತಿಕವಾಗಿ ಸಜ್ಜುಗೊಳಿಸುವ ಪ್ರಯತ್ನದ ಅಂಗವಾಗಿ ಬಂಡಾಯ ಸಂಘಟನೆ ಈ ಕಾರ್ಯಾಗಾರ ಆಯೋಜಿಸಿದೆ’ ಎಂದರು.

‘ಈಗ ದೇಶದಲ್ಲಿ ಪ್ರತಿಗಾಮಿ ಶಕ್ತಿಗಳು ಒಗ್ಗೂಡುತ್ತಿವೆ. ಪ್ರಗತಿಪರ ಶಕ್ತಿಗಳು ಒಡಕಿನತ್ತ ಸಾಗುತ್ತಿವೆ. ಈ ಒಡಕು ದೂರವಾಗಬೇಕು. ಪ್ರಗತಿಪರರು ನಿರ್ದಿಷ್ಟ ಅಂಶಗಳ ಆಧಾರದ ಮೇಲೆ ಮುನ್ನಡೆಯಬೇಕು. 70, 80ರ ದಶಕಕ್ಕಿಂತ ಇಂದು ಪ್ರಗತಿಪರರು ಒಗ್ಗಟ್ಟಾಗಬೇಕಾದ ತುರ್ತು ಹೆಚ್ಚಿದೆ’ ಎಂದು ಹೇಳಿದರು.

‘ಸಮಾಜ ಎನ್ನುವ ಅರ್ಥವೇ ಬದಲಾಗಿದೆ. ಅದನ್ನು ಒಂದು ಜಾತಿಗೆ ಸೀಮಿತಗೊಳಿಸಿ ನೋಡಲಾಗುತ್ತಿದೆ. ಈ ಮನೋಭಾವ ಬದಲಾಗಬೇಕು’ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.