ADVERTISEMENT

ಕೆ ಶಿಪ್‌–4 ಯೋಜನೆಗೆ ಸರ್ವೆ: ಸಿ.ಸಿ.ಪಾಟೀಲ

‘ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿಲ್ಲ’

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 19:27 IST
Last Updated 28 ಮಾರ್ಚ್ 2022, 19:27 IST
ಸಿ.ಸಿ. ಪಾಟೀಲ
ಸಿ.ಸಿ. ಪಾಟೀಲ   

ಬೆಂಗಳೂರು: ಕೆ ಶಿಪ್‌–4 ಹಂತದಯೋಜನೆಗೆ ಶೀಘ್ರ ಸರ್ವೆ ನಡೆಸಲಾಗುವುದು. ಬಾಹ್ಯ ಅನುದಾನದ ನೆರವಿನಿಂದ ಈ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ಇಲಾಖಾ ಬೇಡಿಕೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಟೋಲ್‌ಗಳಲ್ಲಿ ಗುತ್ತಿಗೆ ಪಡೆದಿರುವ ಏಜೆನ್ಸಿಯ ಸಿಬ್ಬಂದಿಯ ವರ್ತನೆ ಬಗ್ಗೆ ಅನೇಕ ದೂರುಗಳಿವೆ. ಈ ಬಗ್ಗೆ ಈ ಹಿಂದೆ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಸಿಬ್ಬಂದಿಯ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಆಗಿತ್ತು. ಇನ್ನೂ ಕೆಲವೆಡೆ ಸಮಸ್ಯೆ ಇದೆ. ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಗುತ್ತಿಗೆ ಕಂಪನಿಯ ಪರವಾನಗಿ ರದ್ದುಪಡಿಸಲು ಪತ್ರ ಬರೆಯಲಾಗುವುದು’ ಎಂದು ಹೇಳಿದರು.

‘ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಸರಾಸರಿ ₹150 ಕೋಟಿ, ಜೆಡಿಎಸ್‌ ಕ್ಷೇತ್ರಗಳಿಗೆ ಸರಾಸರಿ ₹148 ಕೋಟಿ, ಬಿಜೆಪಿ ಕ್ಷೇತ್ರಗಳಿಗೆ ಸರಾಸರಿ ₹122 ಕೋಟಿ
ಅನುದಾನ ನೀಡಲಾಗಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಕ್ಷೇತ್ರಗಳಿಗೆ ಸರಾಸರಿ ₹84 ಕೋಟಿ, ಜೆಡಿಎಸ್‌ ಕ್ಷೇತ್ರಗಳಿಗೆ ಸರಾಸರಿ ₹134 ಕೋಟಿ, ಬಿಜೆಪಿ ಕ್ಷೇತ್ರಗಳಿಗೆ ₹63 ಕೋಟಿ ಹಂಚಿಕೆ ಮಾಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಶಾಸಕರ
ಕ್ಷೇತ್ರಗಳಿಗೆ ₹19 ಕೋಟಿ, ಜೆಡಿಎಸ್‌ ಕ್ಷೇತ್ರಗಳಿಗೆ ₹21 ಕೋಟಿ, ಬಿಜೆಪಿ ಕ್ಷೇತ್ರಗಳಿಗೆ ಸರಾಸರಿ ₹42 ಕೋಟಿ ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಅಪೆಂಡಿಕ್ಸ್‌ ಸಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್‌ನ ಶಿವಾನಂದ ಪಾಟೀಲ, ಯು.ಟಿ.ಖಾದರ್‌, ಟಿ.ಡಿ.ರಾಜೇಗೌಡ ಮತ್ತಿತರರು ದೂರಿದರು.

ಸಿ.ಸಿ.ಪಾಟೀಲ, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಲಭ್ಯವಿದ್ದ ಅನುದಾನ ₹500 ಕೋಟಿಯಾದರೆ, ₹5 ಸಾವಿರ ಕೋಟಿಯ ಯೋಜನೆ ರೂಪಿಸಲಾಗಿತ್ತು. ಹೀಗಾಗಿ, ಹೆಚ್ಚುವರಿ ಹೊರೆ ಆಗಿತ್ತು. ಅಪೆಂಡಿಕ್ಸ್‌– ಸಿಯಲ್ಲೂ ಹೀಗೆ ಆಗಿತ್ತು. ಇಂತಹ ಲೋಪಗಳನ್ನು ಸರಿಪಡಿಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ’ ಎಂದರು.

‘ಕೆಲವು ಗುತ್ತಿಗೆದಾರರು ಯೋಜನಾ ಮೊತ್ತಕ್ಕಿಂತ ಶೇ 30 ಕಡಿಮೆ ಮೊತ್ತಕ್ಕೆ ಗುತ್ತಿಗೆ ಪಡೆಯುತ್ತಿದ್ದಾರೆ. ಕಡಿಮೆ ಮೊತ್ತದಲ್ಲಿ ಗುಣಮಟ್ಟದ ಕೆಲಸ ಮಾಡಲು ಸಾಧ್ಯವೇ ಎಂಬುದು ಪ್ರಶ್ನೆ.
ಆದರೆ, ಕಡಿಮೆ ಮೊತ್ತ
ನಮೂದಿಸುವುದನ್ನು ತಡೆಯಲು ಆಗುವುದಿಲ್ಲ. ಅವರು ನಡೆಸುವ ಕಾಮಗಾರಿ ಮೇಲೆ ನಿಗಾ ಇಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.