
ಗಣತಿ–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಾರ್ಯ ನಿರ್ವಹಿಸಿದ ಸಮೀಕ್ಷಕರಿಗೆ ಗೌರವಧನ ನೀಡಲು ಒಟ್ಟು ₹127.73 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಒಬ್ಬರು, ಇಬ್ಬರು ಸದಸ್ಯರ ಮನೆಗಳ ಸಮೀಕ್ಷೆಗೆ ತಲಾ ₹50ರಂತೆ, ಮೂರು ಮತ್ತು ಮೂರಕ್ಕಿಂತ ಹೆಚ್ಚು ಸದಸ್ಯರ ಮನೆಗಳ ಸಮೀಕ್ಷೆಗೆ ತಲಾ ₹100ರಂತೆ ಸಮೀಕ್ಷೆದಾರರಿಗೆ ಪಾವತಿಸಲಾಗುವುದು.
ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ದಿಂದ (ಇಡಿಸಿಎಸ್) ಸಮೀಕ್ಷಕರ ಹೆಸರು ಮತ್ತು ಅವರಿಗೆ ಪಾವತಿಸಬೇಕಿರುವ ಮೊತ್ತದ ಮಾಹಿತಿ ಪಡೆದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಸಮೀಕ್ಷಕರ ಗೌರವಧನವನ್ನು ಇನ್ನೂ ಬಿಡುಗಡೆ ಮಾಡಿಲ್ಲ.
‘ರಾಜ್ಯದಲ್ಲಿ 1,46,48,053 ಕುಟುಂಬಗಳ ಸಮೀಕ್ಷೆ ನಡೆದಿದೆ. ಒಬ್ಬರು, ಇಬ್ಬರು ಸದಸ್ಯರ 37,41,434 ಕುಟುಂಬಗಳ ಸಮೀಕ್ಷೆ ನಡೆದಿದ್ದು, ಈ ಮನೆಗಳ ಸಮೀಕ್ಷಕರಿಗೆ ತಲಾ ₹50ರಂತೆ ₹18,70,71,700, ಮೂರು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರ 1,09,02,735 ಕುಟುಂಬಗಳ ಸಮೀಕ್ಷಕರಿಗೆ ತಲಾ ₹100ರಂತೆ 109,02,73,500 ಪಾವತಿಸಬೇಕಾಗಿದೆ’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.