ADVERTISEMENT

ಹಾಸಿಗೆ ಹಿಡಿದ ಶಂಕಿತ ಉಗ್ರನ ಪೋಷಕರು

ಚಂದ್ರಹಾಸ ಹಿರೇಮಳಲಿ
Published 16 ಮೇ 2020, 20:00 IST
Last Updated 16 ಮೇ 2020, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶಿವಮೊಗ್ಗ:ಹಿರಿಯ ಪುತ್ರಶಂಕಿತ ಉಗ್ರ ಎಂದು ಸುದ್ದಿ ಹಬ್ಬಿದ ನಂತರ ಅಬ್ದುಲ್‌ ಮತೀನ್ ಅಹಮದ್ ತಾಹ ತಂದೆ–ತಾಯಿ ತೀರ್ಥಹಳ್ಳಿಯ ತಮ್ಮ ಮನೆಯಲ್ಲೇ ಹಾಸಿಗೆ ಹಿಡಿದಿದ್ದಾರೆ. ಮನೆ ಒಳಗೆ ಸ್ವಯಂ ಬಂಧಿಯಾಗಿದ್ದಾರೆ. ಎನ್ಐಎ 26 ವರ್ಷದ ಮತೀನ್‌ನನ್ನು ಶಂಕಿತ ಉಗ್ರರ ಪಟ್ಟಿಗೆ ಸೇರಿಸಿದೆ. ಸುಳಿವು ನೀಡಿದವರಿಗೆ ₹ 3 ಲಕ್ಷ ಬಹುಮಾನ ಘೋಷಿಸಿದೆ.

ತೀರ್ಥಹಳ್ಳಿಯಲ್ಲಿಪ್ರೌಢಶಿಕ್ಷಣ ಪಡೆದು ನಂತರ ಬೆಂಗಳೂರಿನಲ್ಲೇ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾನೆ. ಮಗ ಎಂಜಿನಿಯರ್ ಆಗಬೇಕು ಎಂದು ಪೋಷಕರು ಕನಸು ಕಂಡಿದ್ದರು. ತಂದೆಯದು ಮೂಲತಃ ಚಿತ್ರದುರ್ಗ ಜಿಲ್ಲೆ. ಭಾರತೀಯ ಸೇನೆಯ ತಾಂತ್ರಿಕವಿಭಾಗದಲ್ಲಿ26 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ನಂತರ ಪತ್ನಿಯ ತವರು ತೀರ್ಥಹಳ್ಳಿಯಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮೂವರು ಪುತ್ರರು, ಒಬ್ಬ ಪುತ್ರಿ. ಮತೀನ್ ಹಿರಿಯವನು.

‘ಪತ್ನಿ ಹಾಗೂ ತಮಗೆ ಮಧುಮೇಹ, ರಕ್ತದೊತ್ತಡವಿದೆ. ಆರೋಗ್ಯದ ಸಮಸ್ಯೆ ನಿತ್ಯವೂ ಕಾಡುತ್ತಿದೆ. ಸೇನೆಯಲ್ಲಿ ಸೇವೆಸಲ್ಲಿಸಿದ ಕಾರಣ ಆತ್ಮಗೌರವ ಉನ್ನತಮಟ್ಟದಲ್ಲಿತ್ತು. ಪತ್ನಿ ತೀರ್ಥಹಳ್ಳಿಯಲ್ಲೇ ಹುಟ್ಟಿ ಬೆಳೆದ ಕಾರಣ ಜನ ಮನ್ನಣೆ ಗಳಿಸಿದ್ದಾಳೆ. ಪುತ್ರನ ವಿಷಯ ಕೇಳಿ ಹಾಸಿಗೆ ಹಿಡಿದಿದ್ದಾಳೆ. ನನ್ನದೂ ಅದೇ ಸ್ಥಿತಿ. ಜನರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನಾಲ್ಕೂವರೆ ತಿಂಗಳ ಹಿಂದೆ ಬಂದು ಹೋದವನು ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಕಣ್ಣೀರಾದರು ಮತೀನ್ ತಂದೆ.

ADVERTISEMENT

ಪ್ರೌಢಶಾಲೆಯಲ್ಲೇ ತುಂಬಾ ಚುರುಕುತನ ಇದ್ದ ಹುಡುಗ. ಮುಗ್ಧತೆಯಿಂದ ಗಮನ ಸಳೆಯುತ್ತಿದ್ದ. ಎಲ್ಲರ ಮೆಚ್ಚುಗೆ ಗಳಿಸಿದ್ದ. ಈಗ ಭಯೋತ್ಪಾದನಾ ಸಂಘಟನೆಗಳ ಜತೆ ಸಂಪರ್ಕದಲ್ಲಿ ಇದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ ಆತ ಓದಿದ ತೀರ್ಥಹಳ್ಳಿಯ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.