ADVERTISEMENT

ರಷ್ಯಾದಲ್ಲಿ ತುಳುನಾಡ ದೈವ ನರ್ತನ

ಯು ಟ್ಯೂಬ್‌ ಚಾನಲ್‌ನಲ್ಲಿ ಎಂಟು ಕಂತುಗಳ ಸಾಕ್ಷ್ಯಚಿತ್ರ

ವಿಕ್ರಂ ಕಾಂತಿಕೆರೆ
Published 24 ಅಕ್ಟೋಬರ್ 2022, 20:45 IST
Last Updated 24 ಅಕ್ಟೋಬರ್ 2022, 20:45 IST
ಸ್ವೆಟ್ಲಾನ ರೈಜಕೋವ ಅವರ ಸಾಕ್ಷ್ಯಚಿತ್ರದ ಒಂದು ಭಾಗ
ಸ್ವೆಟ್ಲಾನ ರೈಜಕೋವ ಅವರ ಸಾಕ್ಷ್ಯಚಿತ್ರದ ಒಂದು ಭಾಗ   

ಮಂಗಳೂರು: ಕರಾವಳಿಯ ಉದ್ದಗಲಕ್ಕೆ ಸಂಚರಿಸುತ್ತ ಭೂತಾರಾಧನೆಯ ಬಗ್ಗೆ ಮಾಹಿತಿ ದಾಖಲಿಸುತ್ತಿರುವ ಸ್ವೆಟ್ಲಾನ ರೈಜಕೋವ ಅವರು ತುಳುನಾಡಿನ ದೈವಗಳನ್ನು ಮತ್ತು ದೈವನರ್ತಕರನ್ನು ರಷ್ಯಾದಲ್ಲಿ ಪ್ರಚುರಪಡಿಸುತ್ತಿದ್ದಾರೆ. ದೈವಾರಾಧನೆಯ ಬಗ್ಗೆ ಪ್ರಬಂಧಗಳನ್ನು ರಚಿಸಿರುವ ಅವರ ಯು ಟ್ಯೂಬ್ ಚಾನಲ್‌ನಲ್ಲಿ ಈಗಾಗಲೇ ಎಂಟು ಕಂತುಗಳು ದಾಖಲಾಗಿವೆ.

ಮಾಸ್ಕೊದಲ್ಲಿರುವ ರಷ್ಯನ್ ಅಕಾಡೆಮಿ ಆಫ್ ಸೈನ್ಸ್‌ನ ಇನ್‌ಸ್ಟಿಟ್ಯೂಟ್ ಆಫ್ ಎತ್ನಾಲಜಿ ಪ್ರತಿನಿಧಿಯಾಗಿ ಒಂಬತ್ತು ವರ್ಷದ ಹಿಂದೆ ಕರಾವಳಿಗೆ ಕಾಲಿಟ್ಟ ಸ್ವೆಟ್ಲಾನ ಉಡುಪಿಯಿಂದ ಕಾಸರಗೋಡು ವರೆಗೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿದ್ದಾರೆ.

ತುಳುನಾಡಿನ ದೈವಗಳು, ದೈವನರ್ತಕರು, ಕೋಲ, ನೇಮ ಮುಂತಾದ ಆಚರಣೆಗಳಿಗೆ ಸಾಕ್ಷಿಯಾಗಿ ಹಗಲು–ರಾತ್ರಿ ಚಿತ್ರೀಕರಣ ಮಾಡಿದ್ದಾರೆ. ರಷ್ಯನ್ ಭಾಷೆಯಲ್ಲಿ ಇವುಗಳನ್ನು ನಿರೂಪಿಸಿ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿದ್ದಾರೆ.

ADVERTISEMENT
ಸ್ವೆಟ್ಲಾನ ರೈಜಕೋವ ಅವರ ಸಾಕ್ಷ್ಯಚಿತ್ರದ ಒಂದು ಭಾಗ

ಭೂತಾರಾಧನೆ ಸಂದರ್ಭದಲ್ಲಿ ಬಳಸುವ ವಾದ್ಯಗಳ ಸಂಗೀತವನ್ನು ಹಿನ್ನೆಲೆಯಲ್ಲಿ ಬಳಸಿಕೊಂಡು ‘ಅಂತರಿಕ್ಷಮ್‌ ಪ್ರೊಡಕ್ಷನ್‌‘ ಸಹಯೋಗದಲ್ಲಿ ಸಿದ್ಧಪಡಿಸಿರುವ ಈ ಸಾಕ್ಷ್ಯಚಿತ್ರಗಳ ಜೀವಾಳ ತುಳುನಾಡಿನ ಆರಾಧನಾ ಪದ್ಧತಿ. ದೈವಗಳ ಪರಿಚಯ, ಕಲಾವಿದರ ಸಾಮಾಜಿಕ ಹಿನ್ನೆಲೆ, ಜಾತಿಯ ಮಾಹಿತಿ, ಗುಡಿಗಳ ಪರಿಚಯ, ತುಳು ಮತ್ತು ಕನ್ನಡದಲ್ಲಿ ಸ್ಥಳನಾಮ ಮತ್ತು ದೈವಗಳ ಹೆಸರು ಹೀಗೆ ನಾನಾ ಆಯಾಮಗಳಲ್ಲಿ ಸಾಕ್ಷ್ಯಚಿತ್ರಗಳು ಕುತೂಹಲ ಕೆರಳಿಸುತ್ತವೆ. ಆಟಿಕಳಂಜ, ಕಳಿಯಾಟ್ಟಂ ಮತ್ತು ಕೇರಳದ ‘ತೆಯ್ಯಂ‘ಗಳ ಬಗ್ಗೆಯೂ ಪೂರಕ ಮಾಹಿತಿ ಇದೆ.

ಈಚೆಗೆ ಕೆಲವು ದಿನ ಕರಾವಳಿಯಲ್ಲಿ ಓಡಾಡಿ, ಮಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿರುವ ಅವರು ಸದ್ಯ ಕೋಲ್ಕತ್ತದಲ್ಲಿದ್ದಾರೆ. ದೂರವಾಣಿ ಮೂಲಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ದೈವಾರಾಧನೆಯ ಬಗ್ಗೆ ಆಕಸ್ಮಿಕವಾಗಿ ತಿಳಿದು ಬಂತು. ಕ್ರಮೇಣ ಅದರ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಸಂಶೋಧನೆಯಲ್ಲಿ ತೊಡಗಿದೆ
ಎಂದರು.

‘2013ರಲ್ಲಿ ಬೆಂಗಳೂರಿನಲ್ಲಿದ್ದಾಗ ಯಕ್ಷಗಾನದ ಬಗ್ಗೆ ತಿಳಿದಿದ್ದೆ. ಶಿವಾನಂದ ಹೆಗಡೆ ಅವರು ಉತ್ತರ ಕನ್ನಡದ ಕೆರೆಮನೆಗೆ ಆಹ್ವಾನಿಸಿದರು. ಅಲ್ಲಿಂದ ಉಡುಪಿಗೆ ತೆರಳಿದ್ದಾಗ ಕರಾವಳಿಯ ವಿಶಿಷ್ಟ ಆರಾಧನೆಯ ಬಗ್ಗೆ ತಿಳಿಯಿತು. ಹಾಗೆ ಭೂತಾರಾಧನೆಯ ಹಿಂದೆ ಬಿದ್ದೆ. ಈಗ ತುಳುನಾಡು ನನ್ನ ಕಾರ್ಯಕ್ಷೇತ್ರ ಆಗಿದೆ. ಇಲ್ಲಿನ ವಿಶಿಷ್ಟ ಸಂಸ್ಕೃತಿಯನ್ನು ತಾಯ್ನಾಡಿನ ಜನತೆಗೆ ತಲುಪಿಸುತ್ತಿದ್ದೇನೆ‘ ಎಂದು ಅವರು ತಿಳಿಸಿದರು.

‘ತುಳು ಕಲಿಯಬೇಕು;ಕಾಂತಾರ ನೋಡಬೇಕು’

ಸ್ವೆಟ್ಲಾನ ರೈಜಕೋವ

ಸ್ವೆಟ್ಲಾನ ಅವರು ತುಳುನಾಡಿನಲ್ಲಿ ಓಡಾಡಲು ಆರಂಭಿಸಿ ದಶಕ ಆಗುತ್ತ ಬಂದಿದೆ. ಈಗ ತುಳು ಭಾಷೆ ಕಲಿಯುವ ಆಸೆ ಚಿಗುರಿದೆ. ಆನ್‌ಲೈನ್‌ನಲ್ಲಿ ತುಳು ಭಾಷೆ ಕಲಿಸಲು ವಿದ್ವಾಂಸರೊಬ್ಬರಿಗೆ ಕೋರಿಕೆ ಮಂಡಿಸಿರುವುದಾಗಿ ತಿಳಿಸಿದರು.

ಈಗ, ದೈವಾರಾಧನೆ ಹಿನ್ನೆಲೆಯ ‘ಕಾಂತಾರ’ ಚಿತ್ರ ತುಂಬ ಸದ್ದು ಮಾಡುತ್ತಿದ್ದು ಥ್ರಿಲ್ಲರ್‌ ಎಂದು ಕೇಳಿರುವ ಆ ಚಿತ್ರವನ್ನು ನೋಡುವ ಕುತೂಹಲ ಕೆರಳಿದೆ ಎಂದು ಹೇಳುತ್ತಾರೆ.

ರಷ್ಯನ್ನರು ತಮಿಳು ಭಾಷೆ ಕಲಿಯಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕನ್ನಡ, ತೆಲುಗು, ಮಲಯಾಳಂ ಕಲಿತವರು ಇದ್ದಾರೆ. ನನಗೆ ತುಳು ಭಾಷೆ ಕಲಿಯುವ ಆಸಕ್ತಿ ಮೂಡಿದೆ. ಕನ್ನಡವನ್ನು ಕಲಿಯಬೇಕು ಎಂದು ವಿವರಿಸಿದರು.

****

ತುಳು ವಿದ್ವಾಂಸರು, ಭೂತಾರಾಧನೆ ಬಗ್ಗೆ ನಿರರ್ಗಳವಾಗಿ ಮಾತನಾಡುವ ಸ್ವೆಟ್ಲಾನ ಕಥಕ್ ನೃತ್ಯಗಾರ್ತಿ ಕೂಡ. ಅವರ ಯೂಟ್ಯೂಬ್ ಚಾನಲ್‌ನಲ್ಲಿ ದೈವಾರಾಧನೆಯ ದಾಖಲೀಕರಣ ಆಸಕ್ತಿದಾಯಕವಾಗಿದೆ.

-ಧನಂಜಯ ಕುಂಬ್ಳೆ, ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕ

****

2014ರಿಂದ ಸಾಕ್ಷ್ಯಚಿತ್ರಗಳಿಗೆ ಬೇಕಾದ ಮಾಹಿತಿ ಸಂಗ್ರಹಿಸಿದ್ದೇನೆ. ಭೂತಾರಾಧನೆಯಲ್ಲಿ ತೊಡಗಿಸಿಕೊಂಡಿರುವವರ ಸ್ಥಿತಿಗತಿ ಬಗ್ಗೆ ಕುತೂಹಲ ಮೂಡಿದೆ.

-ಸ್ವೆಟ್ಲಾನ ರೈಜಕೋವ, ರಷ್ಯಾದ ಸಂಶೋಧಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.