ADVERTISEMENT

ಮೂಜಗಂ ನನ್ನನ್ನೇ ಉತ್ತರಾಧಿಕಾರಿಯಾಗಿ ನೇಮಿಸಿದ್ದರು : ಮಲ್ಲಿಕಾರ್ಜುನ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 14:08 IST
Last Updated 18 ಫೆಬ್ರುವರಿ 2020, 14:08 IST
ಮಲ್ಲಿಕಾರ್ಜುನ ಸ್ವಾಮೀಜಿ
ಮಲ್ಲಿಕಾರ್ಜುನ ಸ್ವಾಮೀಜಿ   

ಬೆಳಗಾವಿ: ‘ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿಯಾಗಿ ನನ್ನನ್ನು 1998ರಲ್ಲಿಯೇ ಲಿಂಗೈಕ್ಯ ಮೂಜಗಂ ಅವರು ನೇಮಿಸಿದ್ದಾರೆ. ಹೀಗಾಗಿ ಬೇರೊಬ್ಬರನ್ನು ನೇಮಿಸಬಾರದು’ ಎಂದು ಮೂರುಸಾವಿರ ಮಠದ ಶಾಖಾ ಮಠವಾಗಿರುವ ಘಟಪ್ರಭಾ ಬಳಿಯ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಪೀಠಾಧಿಕಾರಿಯಾಗಿರುವ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಚೆನ್ನಾಗಿ ಮಠವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅವರೇನಾದರೂ ಆರೋಗ್ಯ ಕಾರಣದಿಂದಲೋ ಅಥವಾ ಇನ್ನಾವ ಕಾರಣದಿಂದಲೋ ಪೀಠ ಬಿಟ್ಟುಕೊಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದರೆ ನನ್ನನ್ನೇ ಉತ್ತರಾಧಿಕಾರಿಯಾಗಿ ಪರಿಗಣಿಸಬೇಕು’ ಎಂದು ಕೋರಿದರು.

‘ಮೂಜಗಂ ಅವರು 1998ರಲ್ಲಿ ಬರೆದ ಪತ್ರ ಹಾಗೂ ಈಗಿನ ಪೀಠಾಧಿಕಾರಿಯವರು 2012ರಲ್ಲಿ ನನಗೆ ಬರೆದ ಸಂಪುಟ ಪತ್ರ (ಅಧಿಕಾರ ಪತ್ರ) ನನ್ನ ಬಳಿ ಇದೆ. ಇವೆರಡರ ಆಧಾರದ ಮೇಲೆ ನನಗೆ ಉತ್ತರಾಧಿಕಾರ ಸ್ಥಾನ ಬಿಟ್ಟುಕೊಡಬೇಕು’ ಎಂದು ಕೋರಿಕೊಂಡರು.

ADVERTISEMENT

‘ಮಠದ ಬೈಲಾ ಪ್ರಕಾರ, ಪೀಠಾಧಿಕಾರಿಗಳು, ಹುಬ್ಬಳ್ಳಿ– ಧಾರವಾಡ ಭಕ್ತರು ಹಾಗೂ ಮಠದ ಆಡಳಿತ ಮಂಡಳಿಯವರು ಸೇರಿ ಉತ್ತರಾಧಿಕಾರಿ ನೇಮಿಸಬೇಕು. ಈ ನಿರ್ಣಯವನ್ನು ನೋಂದಣಿ ಮಾಡಿಸಬೇಕು. ಆಗ ಮಾತ್ರ ನಿರ್ಣಯ ಊರ್ಜಿತವಾಗುತ್ತದೆ. ನನ್ನ ವಿಷಯದಲ್ಲಿ ಇವೆಲ್ಲ ಪ್ರಕ್ರಿಯೆಗಳೂ ಮುಗಿದಿವೆ. ಇದರ ಆಧಾರದ ಮೇಲೆ ಹೇಳುವುದಾದರೆ ಎಳ್ಳಷ್ಟೂ ಸಂಶಯಕ್ಕೆ ಎಡೆ ಇಲ್ಲದಂತೆ ನನಗೆ ಉತ್ತರಾಧಿಕಾರಿ ಸ್ಥಾನ ಸಿಗಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿಯೂ ದಾವೆ ಹೂಡಿದ್ದೇನೆ. ವಿಚಾರಣೆ ಹಂತದಲ್ಲಿದೆ’ ಎಂದರು.

‘ಹುಬ್ಬಳ್ಳಿಯಲ್ಲಿ ಇದೇ 23ರಂದು ಕರೆಯಲಾಗಿರುವ ಸಭೆಯೂ ಅಧಿಕೃತ ಸಭೆ ಅಲ್ಲ. ಮಠದ ಆಡಳಿತ ಮಂಡಳಿಯಾಗಲಿ ಅಥವಾ ಪೀಠಾಧಿಪತಿಗಳಾಗಿ ಕರೆದಿಲ್ಲ. ಹಾಗಾಗಿ, ನಾನು ಸಭೆಗೆ ಹೋಗುವುದಿಲ್ಲ. ನನ್ನನ್ನು ಅಧಿಕೃತವಾಗಿ ಕರೆದರೆ ಹೋಗಿ ನನ್ನ ಬಳಿ ಇರುವ ದಾಖಲೆಗಳನ್ನು ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ನಾನು ಉತ್ತರಾಧಿಕಾರಿ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹೀಗಾಗಿ ಗೊಂದಲ ಉಂಟಾಗಿದೆ. ಮಠದ ಸ್ವಾಮೀಜಿ ಹಾಗೂ ಆಡಳಿತ ಮಂಡಳಿಯ ಪ್ರಮುಖರಿಗೆ ಮಾತ್ರ ನನ್ನ ನೇಮಕದ ಬಗ್ಗೆ ಗೊತ್ತಿದೆ. ಆದರೆ, ಅವರು ಏಕೆ ಮೌನವಾಗಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅವರ ಮೌನವು ನನಗೆ ಬೇಸರ ತರಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.