ADVERTISEMENT

ಜಾತಿ ವಾದಕ್ಕಿಂತ ಜಾತ್ಯತೀತವಾದ ಇಂದಿನ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 23:11 IST
Last Updated 5 ಡಿಸೆಂಬರ್ 2020, 23:11 IST
ನಂಜಾವಧೂತ ಸ್ವಾಮೀಜಿ
ನಂಜಾವಧೂತ ಸ್ವಾಮೀಜಿ   

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ, ಸಚಿವ ಸ್ಥಾನ ನೀಡಿಕೆ ಮತ್ತು ಜಾತಿ ಹೆಸರಿನಲ್ಲಿ ನಿಗಮ ರಚನೆಯ ಬೇಡಿಕೆ ಕುರಿತು ಮಾತನಾಡುತ್ತಿರುವ ಕೆಲವು ಮಠಾಧೀಶರು ‘ಸರ್ಕಾರವನ್ನೇ ನಿಯಂತ್ರಿಸುವ’ ಎಚ್ಚರಿಕೆಯನ್ನೂ ನೀಡಿದ್ದಾರೆ.ಈ ಬೆಳವಣಿಗೆಗಳಿಂದಾಗಿ, ಧಾರ್ಮಿಕ ನಾಯಕರ ರಾಜಕೀಯ ಹಸ್ತಕ್ಷೇಪದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಾಜಕೀಯ ನಾಯಕರು ಹಾಗೂ ಮಠಾಧೀಶರ ಪ್ರತಿಕ್ರಿಯೆಗಳು ಇಲ್ಲಿವೆ...

ಸಮುದಾಯಗಳ ಭದ್ರತೆ ಮತ್ತು ಏಕತೆಗೆ ಧಕ್ಕೆ ಬಂದಾಗ ಆಯಾ ಸಮುದಾಯದ ಮಠಾಧೀಶರು ಮಾತನಾಡುವುದರಲ್ಲಿ ತಪ್ಪಿಲ್ಲ. ರಾಜಕೀಯ ಸಮಾಜ ಮತ್ತು ಸಮುದಾಯಗಳಿಂದ ಹೊರತಾಗಿಲ್ಲ. ರಾಜಕೀಯದಲ್ಲಿ ಮಠಾಧೀಶರ ಹಸ್ತಕ್ಷೇಪ ತಪ್ಪು. ಆದರೆ, ರಾಜಕಾರಣದಿಂದ ತಪ್ಪು ಆದಾಗ ತಾವು ಪ‍್ರತಿನಿಧಿಸುವ ಸಮುದಾಯದ ಪರವಾಗಿ ಮಠಾಧೀಶರು ಧ್ವನಿ ಎತ್ತಬೇಕೆ ಹೊರತು ರಾಜಕೀಯ ನಿಲುವುಗಳ ಪರ–ವಿರೋಧವಾಗಿ ಅಲ್ಲ.

ಸಮುದಾಯದಲ್ಲಿ ಅಭಿವೃದ್ಧಿಯಿಂದ ವಂಚಿತರಾದ ಮತ್ತು ಮುಖ್ಯವಾಹಿನಿಯಿಂದ ದೂರವುಳಿದ ಉಪಪಂಗಡಗಳು ಇರುತ್ತವೆ. ಅವುಗಳ ಭದ್ರತೆಗಾಗಿ ಮತ್ತು ಅಭಿವೃದ್ಧಿಗಾಗಿ ಮಾತನಾಡುವುದು ತಪ್ಪೇ?

ADVERTISEMENT

ಒಕ್ಕಲಿಗ ಸಮುದಾಯದಲ್ಲಿ 115 ಉಪಜಾತಿಗಳಿವೆ. ಇವುಗಳಲ್ಲಿ ಕೆಲವು ಉಪಜಾತಿಗಳು ಅಭಿವೃದ್ಧಿ– ಮುಖ್ಯವಾಹಿನಿಯಿಂದ ದೂರ ಉಳಿದಿವೆ. ಹಾಲಕ್ಕಿ ಒಕ್ಕಲಿಗರು ಜೀತದ ‌ಜೀವನ ಸಾಗಿಸುತ್ತಿರುವುದನ್ನು ನೋಡಿದ್ದೇನೆ. ಬಲಿಷ್ಠ ಸಮುದಾಯಗಳವರ ಮನೆಯಲ್ಲಿ ವರ್ಷದ ಕೂಲಿಗೆ ಇದ್ದಾರೆ. ಇಂತಹ ಪಂಗಡಗಳ ಪರವಾಗಿ ಧ್ವನಿ ಎತ್ತಿದಾಗಲೂ ಆಕ್ಷೇಪ ವ್ಯಕ್ತವಾದರೆ ನೋಡುವವರ ದೃಷ್ಟಿಯೇ ಸರಿ ಇಲ್ಲ ಎಂದುಕೊಳ್ಳಬೇಕು.

–ನಂಜಾವಧೂತ ಸ್ವಾಮೀಜಿ, ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನ ಮಠ, ಪಟ್ಟನಾಯಕನಹಳ್ಳಿ, ಶಿರಾ ತಾಲ್ಲೂಕು (ತುಮಕೂರು)

***

ಒತ್ತಡ ಹಾಕುವುದು ಸರಿಯಲ್ಲ

ರಾಜಕಾರಣದಲ್ಲಿ ಧಾರ್ಮಿಕ ನಾಯಕರ ಹಸ್ತಕ್ಷೇಪ ಕಂಡು ಬರುತ್ತಿರುವುದು ದುರಂತ. ರಾಜಕಾರಣಿಗಳು ರಾಜಕಾರಣದಲ್ಲಿರಬೇಕು. ಧಾರ್ಮಿಕ ಮುಖಂಡರು ಧಾರ್ಮಿಕ ಕಾರ್ಯಗಳಲ್ಲಿ ಇರಬೇಕು. ಧರ್ಮದಲ್ಲಿ ರಾಜಕಾರಣ ಬೆರೆಸಬಾರದು. ರಾಜಕಾರಣಿಗಳು ದಾರಿ ತಪ್ಪಿದರೆ ತಿದ್ದಿ ಮಾರ್ಗದರ್ಶನ ನೀಡುವ ಕೆಲಸವನ್ನು ಮಠಾಧೀಶರು ಜನಹಿತದ ನೆಲೆಗಟ್ಟಿನಲ್ಲೇ ಮಾಡಬೇಕು.

ಸನ್ಯಾಸಿಗಳಾದ ನಾವು ಎಲ್ಲ ಸಮಾಜಗಳಿಗೂ ಗುರುಗಳೇ. ಒಂದು ಜಾತಿಗೆ ಸೀಮಿತವಾಗುವುದು ಅಪರಾಧ. ಸಚಿವ ಸ್ಥಾನ, ನಿಗಮ ಮಂಡಳಿಗಳ ಅಧ್ಯಕ್ಷ ಗಾದಿ ಯಾರಿಗಾದರೂ ಕೊಡಲಿ. ಅವರು ಜನರಿಗೆ ಒಳಿತು ಮಾಡಿದರಷ್ಟೇ ಸಾಕು. ಇಂಥವರನ್ನೇ ಮಾಡಿರೆಂದು ಸ್ವಾಮೀಜಿಗಳಾದವರು ಒತ್ತಡ ಹಾಕುವುದು ಸಮಂಜಸವಲ್ಲ.

ಮುರುಘರಾಜೇಂದ್ರ ಸ್ವಾಮೀಜಿ, ಶೂನ್ಯ ಸಂಪಾದನ ಮಠ, ಗೋಕಾಕ, ಬೆಳಗಾವಿ ಜಿಲ್ಲೆ

***

‘ರಾಜಕಾರಣ’ ಕುರುಡಾದರೆ ‘ಧರ್ಮಕಾರಣ’ ಕನ್ನಡಕವಾಗಲಿ

ರಾಜಕಾರಣ ಮತ್ತು ಧರ್ಮಕಾರಣ ಎಂಬುದು ಕಣ್ಣು–ಕನ್ನಡಕ ಇದ್ದ ಹಾಗೆ. ರಾಜಕಾರಣ ಕುರುಡಾದ ಸಂದರ್ಭದಲ್ಲಿ ‘ಧರ್ಮಕಾರಣ’ ಕನ್ನಡಕವಾಗಬೇಕು. ರಾಜಕಾರಣಿಗಳು ತಪ್ಪು ಮಾಡಿದಾಗ, ಧರ್ಮಗುರುಗಳು ಮಾರ್ಗದರ್ಶನ ಮಾಡಿ ಸರಿದಾರಿಯಲ್ಲಿ ನಡೆಸಬೇಕು.

ರಾಜಕಾರಣ ರಾಷ್ಟ್ರರಕ್ಷಣೆಗೆ ಸೀಮಿತವಾದರೆ, ಧರ್ಮಕಾರಣ ವಿಶ್ವವ್ಯಾಪಿ. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದಾಗ ಧರ್ಮಕ್ಕೆ ಚ್ಯುತಿ ಬಂದ ಸಂದರ್ಭದಲ್ಲಿ ಪದವಿಯನ್ನೇ ತಿರಸ್ಕರಿಸಿ ಹೊರನಡೆದರು. ಇದು ಎಲ್ಲರಿಗೂ ಎಚ್ಚರಿಕೆಯ ಸಂದೇಶವಾಗಬೇಕು. ಧಾರ್ಮಿಕ ಮುಖಂಡರಿಗೆ ತಪ್ಪುಗಳನ್ನು ತಿದ್ದುವ, ಬುದ್ಧಿ ಹೇಳುವ ಹಕ್ಕು ಇದೆ. ಆದರೆ, ಬೆದರಿಕೆ ಹಾಕಿ ಭಯದ ವಾತಾವರಣ ಸೃಷ್ಟಿಸಬಾರದು.ಜಾತಿ ವಾದಕ್ಕಿಂತ ಜಾತ್ಯತೀತವಾದ ಇಂದಿನ ಅಗತ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು.

– ಬಸವ ಶಾಂತಲಿಂಗ ಸ್ವಾಮೀಜಿ, ಹೊಸಮಠ, ಹಾವೇರಿ

***

ಲೋಪ–ದೋಷ ಪ್ರಶ್ನಿಸಿ ಆದರೆ, ಒತ್ತಡ ಹಾಕಬೇಡಿ

ಆಡಳಿತ ನಿರ್ವಹಣೆಯಲ್ಲಿ ಸರ್ಕಾರದ ಲೋಪ–ದೋಷಗಳನ್ನು ಮಠಾಧೀಶರು ಪ್ರಶ್ನಿಸಲಿ. ಆದರೆ, ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು. ಬೇಡಿಕೆ ಮಂಡಿಸಿ, ಈಡೇರಿಸುವಂತೆ ಒತ್ತಡ ಹಾಕಬಾರದು. ಎಚ್ಚರಿಕೆಯನ್ನು ನೀಡಲೇಬಾರದು.

ಬಸವಾದಿ ಶರಣರ ಕಾಯಕ ತತ್ವವನ್ನು ಮಠಾಧೀಶರು ಚಾಚೂತಪ್ಪದೇ ಪಾಲಿಸಬೇಕು. ಸಮಾಜದಲ್ಲಿನ ಅಂಕು–ಡೊಂಕು ತಿದ್ದಲು ಮುಂದಾಗಬೇಕು. ಇಂದಿಗೂ ಮೂಢನಂಬಿಕೆಗೆ ಜನರು ಬಲಿಯಾಗುವುದು ತಪ್ಪಿಲ್ಲ. ಮೌಢ್ಯದ ವಿರುದ್ಧ ಜನಜಾಗೃತಿ ಮೂಡಿಸಲಿ.

ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬಹುತೇಕ ಮಠಾಧೀಶರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಈ ಪ್ರಗತಿ ಪಥದಲ್ಲೇ ಮುಂದುವರಿಯುವುದು ಒಳ್ಳೆಯ ಬೆಳವಣಿಗೆ. ರಾಜಕೀಯ ಹಸ್ತಕ್ಷೇಪ ಧಾರ್ಮಿಕ ಮುಖಂಡರ ಸ್ಥಾನಮಾನಕ್ಕೆ ಶೋಭೆ ತರುವಂಥದ್ದಲ್ಲ.

-ಆರ್‌. ಧ್ರುವನಾರಾಯಣ, ಮಾಜಿ ಸಂಸದ, ಕಾಂಗ್ರೆಸ್‌ ಮುಖಂಡ

***

‘ರಾಜಕೀಯದಿಂದ ದೂರವಿರಬೇಕು’

ಧರ್ಮ, ಸಂಸ್ಕೃತಿಯ ರಕ್ಷಣೆ, ಅವುಗಳನ್ನು ಬೆಳೆಸುವ ಬಗೆಗೆ ಸ್ವಾಮೀಜಿಗಳು, ರಾಜಕಾರಣಿಗಳಿಗೆ ಸಲಹೆ ನೀಡಲಿ. ಆದರೆ, ರಾಜಕೀಯದಿಂದ ದೂರ ಇರಬೇಕು.

ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಅವರಿಂದ ಆಗಬೇಕೇ ಹೊರತು, ಒಡೆಯುವ ಕೆಲಸ ಆಗಬಾರದು. ಅವರ ಭಕ್ತರು ಎಲ್ಲ ಪಕ್ಷಗಳಲ್ಲಿಯೂ ಇರುತ್ತಾರೆ. ಅವರು ಒಬ್ಬರ ಕಡೆ ವಾಲುವುದರಿಂದ ಸಮುದಾಯದಲ್ಲಿ ತಪ್ಪು ಅಭಿಪ್ರಾಯ ಹೋಗುತ್ತದೆ

-ಎಸ್‌.ವಿ. ಸಂಕನೂರ, ವಿಧಾನ ಪರಿಷತ್‌ ಸದಸ್ಯ

***

'ರಾಜಕೀಯ ಬೇಡ, ಅವರ ಕೆಲಸ ಮಾಡಲಿ'

ಸ್ವಾಮೀಜಿಗಳಾದವರು ಪತ್ಯಕ್ಷವಾಗಿ ಆಗಲಿ, ಪರೋಕ್ಷವಾಗಿ ಆಗಲಿ ರಾಜಕೀಯ ಮಾಡುವುದಕ್ಕೆ ನಮ್ಮ ಸಹಮತವಿಲ್ಲ. ಧಾರ್ಮಿಕ ವ್ಯವಸ್ಥೆಯೊಂದಿಗೆ ಬದುಕುತ್ತಿರುವ ಅವರು ಸಮಾಜಕ್ಕೆ, ನಾಯಕರಿಗೆ ಮಾರ್ಗದರ್ಶನ ಮಾಡಬೇಕು.

ಸಮಾಜದಲ್ಲಿ ಜಾಗೃತಿ, ಶಿಕ್ಷಣಕ್ಕೆ ಮಹತ್ವ ನೀಡಬೇಕು. ತಪ್ಪು ದಾರಿಗೆ ಹೋಗುವವರನ್ನು ಸರಿದಾರಿಗೆ ತರುವಂತಹ ಕೆಲಸ ಮಾಡಬೇಕು. ಸಮಾಜದಲ್ಲಿರುವ ಬಡವರ ಬಗ್ಗೆ ಕಾಳಜಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾವ ಅವಶ್ಯ.

-ಸಂಗಣ್ಣ ಕರಡಿ, ಕೊಪ್ಪಳ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.