ADVERTISEMENT

ಸ್ವಾಮೀಜಿಗಳೆಂದರೆ ಹೇಸಿಗೆಯಾಗುವ ಸ್ಥಿತಿಗೆ ಬಂದಿದ್ದೇವೆ:ಕಾಡಸಿದ್ಧೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 19:46 IST
Last Updated 28 ಫೆಬ್ರುವರಿ 2021, 19:46 IST
ಕಾಡಸಿದ್ಧೇಶ್ವರ ಸ್ವಾಮೀಜಿ
ಕಾಡಸಿದ್ಧೇಶ್ವರ ಸ್ವಾಮೀಜಿ   

ಹುಬ್ಬಳ್ಳಿ: 'ರಾಜ್ಯದ ಇತ್ತೀಚಿನ ಕೆಲವು ಘಟನೆಗಳಿಂದಾಗಿ ಸ್ವಾಮೀಜಿಗಳೆಂದರೆ ಹೇಸಿಗೆ ಅನ್ನಿಸುವ ಸ್ಥಿತಿಗೆ ಬಂದಿದ್ದೇವೆ’ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ಬೈರಿದೇವರಕೊಪ್ಪದ ಶಿವಾನಂದಮಠದಲ್ಲಿ ಭಾನುವಾರ ಗದುಗಿನ ಶಿವಾನಂದ ಮಠದ ಆಶ್ರಯ
ದಲ್ಲಿ ನಡೆದ ಸಹೃದಯಿ ಮಠಾಧಿಪತಿಗಳ ಒಕ್ಕೂಟದ ಭಕ್ತ ಸಮಾವೇಶದ ಸಮಾರೋಪ ಭಾಷಣ ಮಾಡಿದ ಅವರು, ‘ಯಾವ ಜಾತಿ ಗೋಡೆಯನ್ನು ಕೆಡವಿ ಹಾಕಬೇಕೆಂದು ಬಸವಣ್ಣನವರು ಪ್ರಯತ್ನ ಪಟ್ಟಿದ್ದರೋ ಅದೆಲ್ಲವನ್ನೂ ಉಪೇಕ್ಷಿಸಿ ನಮ್ಮ ನಮ್ಮದೇ ಜಾತಿ, ಸಂಘಟನೆ ಕಟ್ಟಿಕೊಂಡು, ಹೋರಾಟಕ್ಕಿಳಿದು ಸಂಕುಚಿತರಾಗುತ್ತಿದ್ದೇವೆ’ ಎಂದು ವಿಷಾದಿಸಿದರು.

‘ಸ್ವಾಮೀಜಿಗಳಿಗೆ ಮಠದಲ್ಲಿಯೇ ಮಾಡಲು ಸಾಕಷ್ಟು ಕೆಲಸಗಳಿವೆ. ಮತ್ಯಾಕೆ ಬೀದಿಗೆ ಬರುತ್ತಾರೋ?’ ಎಂದು ಲೇವಡಿ ಮಾಡಿದ ಅವರು, ‘ಸಮಾಜ ಒಗ್ಗೂಡಿಸುವ ಮಠಾಧಿಪತಿಗಳು ಅದನ್ನು ವಿಭಜಿಸಬಾರದು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ರಾಜ್ಯದಲ್ಲಿ ಒಂದು ಕಾಲದಲ್ಲಿ ಸುಮಾರು 18 ಸಾವಿರ ಮಠಗಳಿದ್ದವು, ಈಗ ಅವುಗಳ ಸಂಖ್ಯೆ 1,800 ಕ್ಕಿಳಿದಿವೆ. ಮಠಗಳಿಗೆಲ್ಲ ನೂರಾರು ಎಕರೆ ಭೂಮಿ ಇತ್ತು, ಅದನ್ನೆಲ್ಲ ಮಠಾಧೀಶರೇ ನುಂಗಿದರು. ಅದಕ್ಕೆ ಕಾರಣ ಭಕ್ತರು ಅವರನ್ನು ಪ್ರಶ್ನೆ ಮಾಡದೇ ಇರುವುದು’ ಎಂದು ಎಚ್ಚರಿಸಿದರು.

‘ಹಲವೆಡೆ ಮಠಾಧೀಶರು ಮಠದ ಆಸ್ತಿ ತಮ್ಮದೇ, ತಾವೇ ಮಾಲೀಕರು ಎಂದುಕೊಂಡಿದ್ದಾರೆ. ಆದರೆ ಅದು ಭಕ್ತರದ್ದು, ಸಮಾಜದ್ದು. ಕೆಲವು ಮಠಾಧೀಶರು ಪ್ರತಿ ವರ್ಷ ₹ 2ರಿಂದ 3 ಕೋಟಿ ಸಾಲ ಮಾಡುತ್ತಾರೆ; ಅದನ್ನು ಭಕ್ತರು ತೀರಿಸಬೇಕು. ಇದೆಂಥ ಹುಚ್ಚು? ಹಲವಾರು ಮಠಗಳಲ್ಲಿ ಮಠಾಧೀಶರು ತಮ್ಮದೇ ಬಂಧು, ಬಾಂಧವರ ಆಶ್ರಯ ತಾಣ ಮಾಡಿಕೊಂಡಿದ್ದಾರೆ. ಹೀಗಾಗಿ ಮಠಗಳ ಆಸ್ತಿ, ಹಣ ಉಳಿಸಲು ಭಕ್ತರು ಎಚ್ಚರದಿಂದ ಇರಬೇಕು’ ಎಂದರು.

‘ಯಾವುದೇ ಮಠಗಳಿಗೆ ಉತ್ತರಾಧಿಕಾರಿ ನೇಮಿಸುವಾಗ ವಿದ್ಯೆ, ಯೋಗ್ಯತೆಯೇ ಮಾನದಂಡವಾಗಬೇಕು; ಜಾತಿಯಲ್ಲ. ಬಸವಣ್ಣನವರ ಆಶಯದಂತೆ ಮಹಿಳೆಯರಿಗೂ ಅವಕಾಶ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಮಾಡಲು ಮಠಾಧಿಪತಿಗಳ ಒಕ್ಕೂಟ ತೀರ್ಮಾನಿಸಿದೆ’ ಎಂದು ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.