ADVERTISEMENT

ಅನಾಥವಾದ ಸ್ವತಂತ್ರ ಸಮರ ಸೌಧ!

ರಾಷ್ಟ್ರೀಯ ವಸ್ತ್ರಸಂಗ್ರಹಾಲಯ ಮಾಡುವ ಪ್ರಯತ್ನ ನನೆಗುದಿಗೆ

ಕೆ.ನರಸಿಂಹ ಮೂರ್ತಿ
Published 14 ಆಗಸ್ಟ್ 2019, 19:30 IST
Last Updated 14 ಆಗಸ್ಟ್ 2019, 19:30 IST
ಸ್ವತಂತ್ರ ಸಮರ ಸೌಧ
ಸ್ವತಂತ್ರ ಸಮರ ಸೌಧ   

ಬಳ್ಳಾರಿ: ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಇಡಲಾಗಿದ್ದ ನೆನಪಿಗೆ ಇಲ್ಲಿನ ವಿಮ್ಸ್‌ ಆವರಣದಲ್ಲಿ ನಿರ್ಮಾಣಗೊಂಡಿರುವ ಸ್ವತಂತ್ರ ಸಮರ ಸೌಧ ನಿರ್ವಹಣೆ ಕೊರತೆ ಇಲ್ಲದೆ ಬಡವಾಗಿ ನಿಂತಿದೆ.

ವಿಮ್ಸ್‌ ಆವರಣದಲ್ಲೇ ಇದ್ದರೂ ಅದನ್ನು ಯಾರು ನಿರ್ವಹಿಸಬೇಕು ಎಂಬ ಕುರಿತು ಸ್ಪಷ್ಟತೆಯೇ ಇಲ್ಲವಾಗಿರುವ ಪರಿಣಾಮವಾಗಿ, ಅಲ್ಲಿ ಕಸ, ಧೂಳು ತೆಗೆಯುವವರೂ ಇಲ್ಲ. ಭದ್ರತೆಯೂ ಇಲ್ಲದ ತೆರೆದ ಬಯಲಿನಲ್ಲಿರುವ ಕಟ್ಟಡದೊಳಗೆ ಬೀದಿ ನಾಯಿಗಳು ಸಲೀಸಾಗಿ ಓಡಾಡಿ ತಂಗುತ್ತವೆ.

ಏಳು ವರ್ಷದ ಹಿಂದೆ ಉದ್ಘಾಟನೆ: ಈ ಸೌಧವನ್ನು 2012ರ ಡಿಸೆಂಬರಿನಲ್ಲಿ ನವೀಕರಿಸಿ ಉದ್ಘಾಟಿಸಲಾಗಿತ್ತು. ಸೌಧವನ್ನು ಸ್ವಾತಂತ್ರ್ಯ ಹೋರಾಟದ ನೆನಪು ಮತ್ತು ದಾಖಲೆಗಳ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಪ್ರಯತ್ನವೂ ಸ್ಥಗಿತಗೊಂಡಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಬುಧವಾರ ಪ್ರತಿಕ್ರಿಯಿಸಿದ ಸ್ವತಂತ್ರ ಸಮರ ಸೌಧದ ಸಂಗ್ರಹಾಲಯ ಸಮಿತಿ ಸದಸ್ಯ ಟಿ.ಜಿ.ವಿಠಲ್, ‘ಸ್ವಾತಂತ್ರ್ಯ ಹೋರಾಟಗಾರರನ್ನು ಇಡಲಾಗಿದ್ದ ಈ ಸೌಧ, ಕೇಂದ್ರ ಕಾರಾಗೃಹ ಮತ್ತು ವೆಲ್ಲೆಸ್ಲಿ ಟಿ.ಬಿ.ಸ್ಯಾನಿಟೋರಿಯಂ ಆವರಣದದಲ್ಲಿರುವ ಕಾರಾಗೃಹದ ನೆನಪುಗಳನ್ನು ದಾಖಲಿಸುವ ಕೆಲಸ ಬಹುತೇಕ ಮುಗಿದಿದೆ. ಆದರೆ ಸಂಗ್ರಹಾಲಯ ಸ್ಥಾಪನೆ ಅನಿಶ್ಚಿತವಾಗಿದೆ’ ಎಂದು ವಿಷಾದಿಸಿದರು.

‘ಹೊಸ ಜಿಲ್ಲಾಧಿಕಾರಿ ಕಚೇರಿಯನ್ನು ನಿರ್ಮಿಸಲಾಗುತ್ತಿದ್ದು, ಅದು ಪೂರ್ಣಗೊಂಡ ಬಳಿಕ, ಹಳೇ ಕಚೇರಿ ಆವರಣದಲ್ಲಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಸ್ಥಳಾವಕಾಶ ಮಾಡಿಕೊಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಹಾಗೂ ಹಿಂದಿನ ಜಿಲ್ಲಾಧಿಕಾರಿ ಹಾಗೂ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಭರವಸೆ ನೀಡಿದ್ದರು. ಅವರು ವರ್ಗಾವಣೆಗೊಂಡಿದ್ದಾರೆ, ಹೊಸ ಜಿಲ್ಲಾಧಿಕಾರಿ ಗಮನ ಸೆಳೆಯಲಾಗುವುದು’ ಎಂದರು.

ಈ ಸಮಿತಿಯಲ್ಲಿ ವಿಮ್ಸ್‌ ನಿರ್ದೇಶಕರು ಕಾರ್ಯಾಧ್ಯಕ್ಷರು, ಬಳ್ಳಾರಿ ಉಪವಿಭಾಗಾಧಿಕಾರಿ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ, ಕನ್ನಡ–ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು,ಡಾ.ಟೇಕೂರು ರಾಮನಾಥ್, ಕೋಲಾಚಲಂ ಅನಂತಪ್ರಕಾಶ್‌ ಇದ್ದಾರೆ.

ಅಸಹಕಾರ ಚಳವಳಿಯ ನೆನಪು

ಅಸಹಕಾರ ಚಳವಳಿಯ ಪ್ರಚಾರಕ್ಕೆಂದು ಬಂದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ 1921ರ ಅಕ್ಟೋಬರ್‌ 1ರಂದು ಇಲ್ಲಿನ ರೈಲು ನಿಲ್ದಾಣದಲ್ಲಿ ತಂಗಿದ್ದ ಸ್ಥಳವನ್ನೂ ಸ್ಮಾರಕದ ರೂಪದಲ್ಲಿ ಸಂರಕ್ಷಿಸಲಾಗಿದೆ. ಗಾಂಧೀಜಿ ಇಲ್ಲಿ ತಂಗಿದ್ದರು ಎಂಬ ಫಲಕವನ್ನು ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಇದು ಸ್ವಾತಂತ್ರ್ಯ ಹೋರಾಟದ ಮಹತ್ವದ ಕುರುಹಾಗಿ ಉಳಿದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.