ADVERTISEMENT

ಸುಶ್ಮಿತಾ, ಕಲೈವನನ್‌ಗೆ ಪ್ರಶಸ್ತಿ

ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಪಂದ್ಯಾವಳಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಆಗಸ್ಟ್ 2019, 19:45 IST
Last Updated 29 ಆಗಸ್ಟ್ 2019, 19:45 IST
ಪ್ರಶಸ್ತಿ ಜಯಿಸಿದ ಸಂಭ್ರಮದಲ್ಲಿ ಎಂ. ಕಲೈವನನ್‌ ಹಾಗೂ ಸುಶ್ಮಿತಾ ಆರ್‌. ಬಿದ್ರಿ
ಪ್ರಶಸ್ತಿ ಜಯಿಸಿದ ಸಂಭ್ರಮದಲ್ಲಿ ಎಂ. ಕಲೈವನನ್‌ ಹಾಗೂ ಸುಶ್ಮಿತಾ ಆರ್‌. ಬಿದ್ರಿ   

ಹೊಸಪೇಟೆ: ಗುರುವಾರ ಇಲ್ಲಿನ ತುಂಗಭದ್ರಾ ರಿಕ್ರಿಯೇಷನ್‌ ಕ್ಲಬ್‌ನಲ್ಲಿ ನಡೆದ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಪಂದ್ಯಾವಳಿಯ ಹಿರಿಯರ ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಬೆಂಗಳೂರಿನ ಎಂ. ಕಲೈವನನ್‌ ಮತ್ತು ಮಹಿಳೆಯರ ವಿಭಾಗದಲ್ಲಿ ಸುಶ್ಮಿತಾ ಆರ್‌. ಬಿದ್ರಿ ಗೆಲುವು ಸಾಧಿಸಿ, ಪ್ರಶಸ್ತಿ ಜಯಿಸಿದ್ದಾರೆ.

ಸುಶ್ಮಿತಾ ಅವರು ಬೆಂಗಳೂರಿನವರೇ ಆದ ವಿ. ಖುಷಿ ವಿರುದ್ಧ ಮೊದಲ ಸೆಟ್‌ನಲ್ಲಿ 5–11ರಿಂದ ಸೋಲು ಕಂಡಿದ್ದರು. ಬಳಿಕ ಸತತ ಮೂರು ಸೆಟ್‌ಗಳಲ್ಲಿ 11–8, 11–8, 11–9ರಿಂದ ಖುಷಿ ಅವರನ್ನು ಮಣಿಸಿದರು. ಐದನೇ ಸೆಟ್‌ನಲ್ಲಿ ಪುಟಿದೆದ್ದ ಖುಷಿ 11–8ರಿಂದ ಸುಶ್ಮಿತಾ ಅವರನ್ನು ಸೋಲಿಸಿದರು. ಆರನೇ ಸುತ್ತಿನಲ್ಲಿ ಸುಶ್ಮಿತಾ, 11–4ರಿಂದ ಖುಷಿ ಅವರನ್ನು ಪರಾಭವಗೊಳಿಸಿ, ಪ್ರಶಸ್ತಿ ತನ್ನದಾಗಿಸಿಕೊಂಡರು.

ಬೆಂಗಳೂರಿನ ಸಮರ್ಥ ಕುರ್ದಿಕೇರಿ ಅವರನ್ನು ಕಲೈವನನ್‌ ಅವರು 4–1ರಿಂದ ಮಣಿಸಿದರು. ಮೊದಲ ಸುತ್ತಿನಲ್ಲಿ ಕಲೈವನನ್‌ ಹಿನ್ನಡೆ ಅನುಭವಿಸಿದ್ದರು. 11–8ರಿಂದ ಕಲೈವನನ್‌ ಅವರನ್ನು ಸೋಲಿಸಿ, ಕುರ್ದಿಕೇರಿ ಶುಭಾರಂಭ ಮಾಡಿದ್ದರು. ಆದರೆ, ನಂತರದ ನಾಲ್ಕು ಸೆಟ್‌ಗಳಲ್ಲಿ ಸೋಲು ಕಂಡು ಪ್ರಶಸ್ತಿ ಕೈಚೆಲ್ಲಿದರು. 11–7, 11–4, 11–7, 11–4ರಿಂದ ಪರಾಭವಗೊಂಡರು.

ADVERTISEMENT

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಸುಶ್ಮಿತಾ ಅವರು ಬೆಂಗಳೂರಿನ ಅದಿತಿ ಪಿ. ಜೋಷಿ ಅವರನ್ನು 12–10, 11–5, 9–11, 11–9, 11–8ರಿಂದ ಮಣಿಸಿದರೆ, ಖುಷಿ ಅವರು ಮರಿಯಾ ರಾನಿ ಅವರನ್ನು 6–11, 11–6, 12–10, 11–7, 11–8ರಿಂದ ಸೋಲಿಸಿದರು.

ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಕಲೈವನನ್‌ ಅವರು ಬೆಂಗಳೂರಿನ ಅನಿರ್ಬನ್‌ ರಾಯ್‌ ಚೌಧರಿ ವಿರುದ್ಧ 11–4, 11–6, 4–11, 7–11, 11–7, 10–12, 11–9ರಿಂದ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಸಮರ್ಥ ಅವರು ರೋಹನ್‌ ಎಸ್‌. ಜಮದಗ್ನಿ ಅವರನ್ನು 11–9, 10–12, 11–5, 11–7, 11–9ರಿಂದ ಮಣಿಸಿದರು.

ಶುಕ್ರವಾರ (ಆ.30) ಯುತ್‌ ಬಾಲಕ/ಬಾಲಕಿಯರ ವಿಭಾಗ, ಜೂನಿಯರ್‌ ಬಾಲಕ/ಬಾಲಕಿ, ಸಬ್‌ ಜೂನಿಯರ್‌ ಬಾಲಕರ ವಿಭಾಗದಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಯಲಿದೆ. ಬಳ್ಳಾರಿ ಜಿಲ್ಲಾ ಟೇಬಲ್‌ ಟೆನಿಸ್‌ ಅಸೋಸಿಯೇಶನ್‌ ಪಂದ್ಯಾವಳಿ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.