ADVERTISEMENT

ತಹಶೀಲ್ದಾರ್ ವಾಹನ ತೋರಿಸಿ ಹಣ ವಸೂಲಿ ಮಾಡುತ್ತಿದ್ದ ಅಧಿಕಾರಿಗಳು ಅಮಾನತು

ಕೋಲಾರ: ಮರಳು ಸಾಗಣೆ ಲಾರಿಗಳಿಗೆ ತಡೆ, 3 ಸಿಬ್ಬಂದಿ ಅಮಾನತು

ಜೆ.ಆರ್.ಗಿರೀಶ್
Published 1 ಮಾರ್ಚ್ 2020, 20:07 IST
Last Updated 1 ಮಾರ್ಚ್ 2020, 20:07 IST

ಕೋಲಾರ: ತಹಶೀಲ್ದಾರ್‌ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡು ಮರಳು ಮತ್ತು ಕಲ್ಲು ಸಾಗಣೆ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಅಧಿಕಾರಿಗಳ ಜಾಲ ಸಿಕ್ಕಿಬಿದ್ದಿದೆ.

ತಾಲ್ಲೂಕಿನ ವಕ್ಕಲೇರಿ ಹೋಬಳಿ ಕಂದಾಯ ನಿರೀಕ್ಷಕ ಮಂಜುನಾಥ್‌, ತಹಶೀಲ್ದಾರ್‌ ಕಾರು ಚಾಲಕ ಶ್ರೀನಿವಾಸ್‌, ಕಚೇರಿಯ ‘ಡಿ’ ಗ್ರೂಪ್‌ ಸಿಬ್ಬಂದಿ ಚಂದ್ರು ಮತ್ತು ಜಗದೀಶ್‌ ಜತೆ ಸೇರಿ ಹಲವು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದರು.

ಚಾಲಕ ಶ್ರೀನಿವಾಸ್‌ ಕಚೇರಿ ಕೆಲಸ ಮುಗಿದ ಬಳಿಕ ತಹಶೀಲ್ದಾರ್‌ ಅವರನ್ನು ಮನೆಗೆ ಬಿಡುತ್ತಿದ್ದರು. ತಾಲ್ಲೂಕು ಕಚೇರಿ ಶೆಡ್‌ನಲ್ಲಿ ವಾಹನ ನಿಲ್ಲಿಸುತ್ತಿದ್ದರು. ನಂತರ ತಡರಾತ್ರಿ ಮಂಜುನಾಥ್‌ ಮತ್ತು ಶ್ರೀನಿವಾಸ್‌ ತಹಶೀಲ್ದಾರ್‌ ಕಚೇರಿಯ ಶೆಡ್‌ಗೆ ಬಂದು ಕಾರು ತೆಗೆದುಕೊಂಡು ಮರಳು ಹಾಗೂ ಕಲ್ಲು ಸಾಗಣೆ ಲಾರಿಗಳ ಜಾಡು ಹಿಡಿದು ಹೋಗುತ್ತಿದ್ದರು.

ADVERTISEMENT

ಲಾರಿಗಳನ್ನು ತಡೆಯುತ್ತಿದ್ದ ಮಂಜುನಾಥ್‌ ಮತ್ತು ಶ್ರೀನಿವಾಸ್‌, ಚಾಲಕರಿಗೆ ಸಮೀಪದಲ್ಲೇ ನಿಂತಿರುವ ತಹಶೀಲ್ದಾರ್‌ ಕಾರು ತೋರಿಸುತ್ತಿದ್ದರು. ‘ಕಾರಿನಲ್ಲಿ ತಹಶೀಲ್ದಾರ್‌ ಕುಳಿತಿದ್ದಾರೆ. ಹಣ ಕೊಡದಿದ್ದರೆ ಲಾರಿ ಸಮೇತ ಮರಳು ಮತ್ತು ಕಲ್ಲು ಜಪ್ತಿ ಮಾಡುತ್ತಾರೆ’ ಎಂದು ಬೆದರಿಸುತ್ತಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ: ಮಂಜುನಾಥ್‌ ಮತ್ತು ಶ್ರೀನಿವಾಸ್‌ ಫೆ.27ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮರಳು ಲಾರಿ ತಡೆದು ₹ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಾರಿ ಚಾಲಕ, ಮಾಲೀಕರಿಗೆ ಕರೆ ಮಾಡಿ ಈ ವಿಷಯ ತಿಳಿಸಿದರು. ಲಾರಿ ಮಾಲೀಕರು ಸ್ಥಳೀಯ ಬಿಜೆಪಿ ಮುಖಂಡರ ಮೂಲಕ ಪ್ರಾದೇಶಿಕ ಆಯುಕ್ತರು ಹಾಗೂ ಉಪ ವಿಭಾಗಾಧಿಕಾರಿ ಅವರನ್ನು ಸಂಪರ್ಕಿಸಿ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರವನ್ನು ತಿಳಿಸಿದರು.

ತಕ್ಷಣ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಮತ್ತು ತಹಶೀಲ್ದಾರ್‌ ಶೋಭಿತಾ, ತಡರಾತ್ರಿಯೇ ಸ್ಥಳಕ್ಕೆ ತೆರಳಿದರು. ಆಗ ಮಂಜುನಾಥ್‌, ಶ್ರೀನಿವಾಸ್‌, ಜಗದೀಶ್‌ ಮತ್ತು ಚಂದ್ರು ವಾಹನ ಸಮೇತ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಸಂಬಂಧ ಶ್ರೀನಿವಾಸ್‌, ಜಗದೀಶ್‌ ಮತ್ತು ಚಂದ್ರು ಅವರನ್ನು ಅಮಾನತು ಮಾಡಲಾಗಿದೆ.

**

ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿರುವ ಕಂದಾಯ ನಿರೀಕ್ಷಕ ಮಂಜುನಾಥ್‌ ವಿರುದ್ಧ ದೂರು ದಾಖಲಿಸಿದ್ದೇನೆ. ವಿವರಣೆ ಕೊಡುವಂತೆ ನೋಟಿಸ್‌ ನೀಡಿದ್ದೇನೆ.
-ಶೋಭಿತಾ, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.