ADVERTISEMENT

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಸನ್ಮಾನಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:22 IST
Last Updated 20 ಅಕ್ಟೋಬರ್ 2024, 15:22 IST
<div class="paragraphs"><p>ಗೌರಿ ಲಂಕೇಶ್</p></div>

ಗೌರಿ ಲಂಕೇಶ್

   

ಬೆಂಗಳೂರು: ‘ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿಗಳನ್ನು ಸನ್ಮಾನಿಸಿರುವವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಗೌರಿ ಬಳಗ ಒತ್ತಾಯಿಸಿದೆ. 

ಈ ಸಂಬಂಧ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿರುವ ಬಳಗವು, ‘ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವುದನ್ನು ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಿ ಮಾತ್ರ ಕಂಡಿದ್ದೆವು. ಆದರೆ ಈಗ ಅಂಥದ್ದೇ ಕೃತ್ಯ ಕರ್ನಾಟಕದಲ್ಲೂ ನಡೆದಿರುವುದನ್ನು ಕಂಡು ದಂಗಾಗಿದ್ದೇವೆ’ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದೆ.

ADVERTISEMENT

‘ಇದು ಕರ್ನಾಟಕದ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಆದ ದೊಡ್ಡ ಕಳಂಕ. ಗೃಹ ಇಲಾಖೆಯು ಇಂತಹ ಕೃತ್ಯಗಳನ್ನು ನೋಡಿಕೊಂಡು ಸುಮ್ಮನಿರುವುದು ನಮಗೆ ಬೇಸರವನ್ನುಂಟು ಮಾಡಿದೆ. ಈ ಸನ್ಮಾನವು ಕೊಲೆಗೆ ನೀಡಿರುವ ಪ್ರಚೋದನೆಯಾಗಿದೆ. ಹಿಂಸೆಗೆ ಒದಗಿಸಿರುವ ಸಾಮಾಜಿಕ ಮನ್ನಣೆಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ’ ಎಂದು ಬಳಗವು ಹೇಳಿದೆ.

‘ಸನ್ಮಾನ ಮಾಡಿದ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ದ್ವೇಷಕ್ಕೆ ಪ್ರಚೋದನೆ ನೀಡಿದ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ತ್ವರಿತವಾಗಿ ನಡೆಸಿ, ಹಂತಕರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದೆ.

ಈ ಒತ್ತಾಯದ ಪರವಾಗಿ ಇದೇ 22ರಂದು ರಾಜ್ಯವ್ಯಾಪಿ ಪ್ರತಿರೋಧ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಬಳಗ ತಿಳಿಸಿದೆ. ಪತ್ರಕ್ಕೆ ಕವಿತಾ ಲಂಕೇಶ್, ಇಂದಿರಾ ಲಂಕೇಶ್‌, ತೀಸ್ತಾ ಸೆಟಲ್ವಾಡ್‌, ಗಣೇಶ್‌ ದೇವಿ, ವಿ.ಎಸ್.‌ ಶ್ರೀಧರ್‌, ಚುಕ್ಕಿ ನಂಜುಂಡಸ್ವಾಮಿ, ಬಿ.ಟಿ.ಲಲಿತಾ ನಾಯಕ್ ಸೇರಿ 50ಕ್ಕೂ ಹೆಚ್ಚು ಮಂದಿ ಸಹಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.