ADVERTISEMENT

ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ – ಬಿಜೆಪಿ ಜಟಾಪಟಿ

ಬಿಜೆಪಿ ವಿರುದ್ಧ ಶೇ 40, ಕಾಂಗ್ರೆಸ್‌ ವಿರುದ್ಧ ಶೇ 60 ಲಂಚದ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 20:00 IST
Last Updated 23 ಜನವರಿ 2023, 20:00 IST
‘ಭ್ರಷ್ಟಾಚಾರ ತೊಲಗಿಸಿ ಬೆಂಗಳೂರು ಉಳಿಸಿ’ ಎಂಬ ಘೋಷಣೆಯೊಂದಿಗೆ ಬೆಂಗಳೂರಿನ 350 ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಇದರಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಇದ್ದರು
‘ಭ್ರಷ್ಟಾಚಾರ ತೊಲಗಿಸಿ ಬೆಂಗಳೂರು ಉಳಿಸಿ’ ಎಂಬ ಘೋಷಣೆಯೊಂದಿಗೆ ಬೆಂಗಳೂರಿನ 350 ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಇದರಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಇದ್ದರು   

ಭ್ರಷ್ಟಾಚಾರದ ವಿಚಾರವನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಜಟಾಪಟಿ ತೀವ್ರಗೊಳಿಸಿವೆ. ಸರ್ಕಾರದ ವಿರುದ್ಧ ಬೆಂಗಳೂರಿನ 350ಕ್ಕೂ ಹೆಚ್ಚು ಕಡೆ ಕಾಂಗ್ರೆಸ್‌ ಸೋಮವಾರ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಬಿಜೆಪಿ ಪ್ರತಿಪಕ್ಷದ ನಾಯಕರ ವಿರುದ್ಧ ಆರೋಪಗಳ ಮಳೆಗರೆದಿದೆ. ಈ ಮೂಲಕ ಚುನಾವಣಾ ಕಣ ರಂಗೇರಿದೆ. ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ರಾಜಧಾನಿಯ 280 ಟ್ರಾಫಿಕ್‌ ಸಿಗ್ನಲ್‌ಗಳು, 51 ಮೆಟ್ರೊ ರೈಲು ನಿಲ್ದಾಣಗಳು ಮತ್ತು 26 ಮೇಲ್ಸೇತುವೆಗಳ ಬಳಿ ಸೋಮವಾರ ಬೆಳಿಗ್ಗೆ ಏಕಕಾಲಕ್ಕೆ ಮೌನ ಪ್ರತಿಭಟನೆ ನಡೆಸಿದರು.

‘ಲಂಚ ಪಡೆದಿರುವುದಾಗಿ ಹೇಳಿದರೆ ರಾಜಕೀಯ ಸನ್ಯಾಸ’

ಕೋಲಾರ: ‘ನಾನು ಮುಖ್ಯಮಂತ್ರಿಯಾಗಿದ್ದಾಗ ಹಣ ಖಾತರಿ ಪತ್ರ (ಎಲ್‌ಓಸಿ) ಬಿಡುಗಡೆ ಮಾಡಲು ಒಂದೇ ಒಂದು ರೂಪಾಯಿ ಲಂಚ ಪಡೆದಿರುವುದಾಗಿ ಒಬ್ಬ ಗುತ್ತಿಗೆದಾರ ಹೇಳಿದರೂ ರಾಜಕೀಯ ನಿವೃತ್ತಿ ಪಡೆದು, ಸನ್ಯಾಸ ಪಡೆಯುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ADVERTISEMENT

ಸೋಮವಾರ ಇಲ್ಲಿ ಕಾಂಗ್ರೆಸ್ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಮಾತನಾಡಿದ ಅವರು,‘40 ಪರ್ಸೆಂಟ್‌ ಕಮಿಷನ್‌ ಬಗ್ಗೆ ‌ಅಧಿವೇಶನದಲ್ಲಿ ಪ್ರಸ್ತಾಪ ಮಾಡಲು ಮೂರು ಬಾರಿ ಮುಂದಾಗಿದ್ದೆ’ ಎಂದರು. ‘ಈ ಬಗ್ಗೆ ಚರ್ಚೆಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಕೊಡಲಿಲ್ಲ. ನಾನು ಎಂದೂ ಇಂಥ ಸ್ಪೀಕರ್ ನೋಡಿಲ್ಲ' ಎಂದರು.

‘ಎಲ್‌ಓಸಿ ಬಿಡುಗಡೆಗೆ ಶೇ 8 ರಿಂದ 10 ಕಮಿಷನ್‌ ಪಡೆಯುತ್ತಾರೆ. ಪ್ರತಿ ಗುತ್ತಿಗೆಯಲ್ಲಿ ಶೇ 40 ಕಮಿಷನ್ ಕೊಡಬೇಕಿದೆ. ಗುತ್ತಿಗೆದಾರರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ತನಿಖೆ ನಡೆಸಿದರೆ ದಾಖಲೆ ಕೊಡಲು ಸಿದ್ಧರಿದ್ದಾರೆ. ಒಂದೂವರೆ ವರ್ಷವಾದರೂ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಅವಧಿಯಲ್ಲಿ ಶೇ 60 ಪ್ರೀಮಿಯಂ: ಬೊಮ್ಮಾಯಿ

ಬೆಂಗಳೂರು: ‘ಕಾಂಗ್ರೆಸ್‌ನವರು ಲೋಕಾಯುಕ್ತ ಮುಚ್ಚಿದ ಪುಣ್ಯಾತ್ಮರು. ಅವರ ಕರ್ಮಕಾಂಡ ಮುಚ್ಚಿ ಹಾಕಲೆಂದೇ ಸ್ವತಂತ್ರ, ಸಂವಿಧಾನಬದ್ಧ ಸಂಸ್ಥೆಯಾದ ಲೋಕಾಯುಕ್ತವನ್ನು ಸಿದ್ದರಾಮಯ್ಯ ಸರ್ಕಾರ ಮುಚ್ಚಿತು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುವುದು ಹಾಸ್ಯಾಸ್ಪದ’ ಎಂದರು. ‘ಬಿಬಿಎಂಪಿಯಲ್ಲಿ ಸುಮಾರು ₹ 800 ಕೋಟಿಯಲ್ಲಿ ಶೇ 60ರಷ್ಟು ಪ್ರೀಮಿಯಂ ನೀಡಿರುವುದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ದಾಖಲೆಗಳಲ್ಲಿದೆ. ಅವರು ಅಂಥ ಶೂರರು. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅದು ಸೋಗಲಾಡಿತನ. ಕಾಂಗ್ರೆಸ್‌ನವರ ಭ್ರಷ್ಟಾಚಾರಗಳ ಬಗ್ಗೆ ನಮ್ಮ ಸರ್ಕಾರ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದೆ. ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಅವರೂ ಲೋಕಾಯುಕ್ತಕ್ಕೆ ದೂರು ನೀಡಲಿ’ ಎಂದು ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

‘₹ 35 ಸಾವಿರ ಕೋಟಿ ಹಗರಣ’

ಬೆಂಗಳೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ‘ರೀಡೂ’ ಹೆಸರಿನಲ್ಲಿ ಡಿನೋಟಿಫಿಕೇಷನ್ ಸೇರಿದಂತೆ ₹ 35,000 ಕೋಟಿ ಮೊತ್ತದ ಹಗರಣಗಳು ನಡೆದಿವೆ. ಬಡವರಿಗಾಗಿ ಮನೆ ನಿರ್ಮಾಣದ ಗುತ್ತಿಗೆಯಲ್ಲೂ ಭ್ರಷ್ಟಾಚಾರ ನಡೆದಿತ್ತು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಆರೋಪಿಸಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೀಡೂ ಹೆಸರಿನಲ್ಲಿ ಬಿಡಿಎ ಜಮೀನು ಡಿನೋಟಿಫೈ ಮಾಡಿದ ಅಕ್ರಮದ ಕುರಿತು ಮಹಾಲೇಖಪಾಲರ(ಸಿಎಜಿ) ವರದಿಯಲ್ಲೇ ಬಹಿರಂಗವಾಗಿದೆ. ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ 900 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದು, ಬೆಂಗಳೂರಿನ 10,000 ಕುಟುಂಬಗಳಿಗೆ ಅನ್ಯಾಯವಾಗಿದೆ’ ಎಂದರು.

‘ಸಿದ್ದರಾಮಯ್ಯ ಅವಧಿಯಲ್ಲಿ ಬೆಂಗಳೂರನ್ನು ತ್ಯಾಜ್ಯದ ನಗರ ಮಾಡಿದ್ದರು. ಬಡವರು ತಿನ್ನುವ ಅನ್ನ, ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಿದ ಹಾಸಿಗೆ, ದಿಂಬಿನ ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿತ್ತು. ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ. ಜಾರ್ಜ್‌, ಟೆಂಡರ್‌ ಶ್ಯೂರ್‌ ರಸ್ತೆ ನಿರ್ಮಾಣದಲ್ಲಿ ಶೇಕಡ 53.86ರಷ್ಟು ಹೆಚ್ಚುವರಿ ಮೊತ್ತ ಪಾವತಿಸಿದ್ದರು’ ಎಂದು ವಾಗ್ದಾಳಿ ನಡೆಸಿದರು.

‘ಜನರ ವಿರೋಧವನ್ನು ಲೆಕ್ಕಿಸದೆ ಹಣ ಲೂಟಿಗಾಗಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಬಡವರಿಗಾಗಿ 50,000 ಮನೆ ನಿರ್ಮಿಸುವ ಯೋಜನೆಯ ಗುತ್ತಿಗೆಯನ್ನು ಕೇವಲ ಹತ್ತು ಗುತ್ತಿಗೆದಾರರಿಗೆ ನೀಡಲಾಗಿತ್ತು. ತ್ಯಾಜ್ಯ ನಿರ್ವಹಣೆಯಲ್ಲೂ ₹ 1,006 ಕೋಟಿ ಹಗರಣ ನಡೆದಿತ್ತು’ ಎಂದು ಟೀಕಿಸಿದರು.


ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಗೆ ಶೇ 53.86ರಷ್ಟು ಹೆಚ್ಚುವರಿ ಮೊತ್ತ ಪಾವತಿಸಿ, ಅಕ್ರಮ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಲೋಕಾಯುಕ್ತರಿಗೆ ಸೋಮವಾರ ದೂರು ಸಲ್ಲಿಸಲಾಗಿದೆ.

ದೂರು ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನಾರಾಯಣಸ್ವಾಮಿ, ‘ಕಾಂಗ್ರೆಸ್‌ನವರು ನಮ್ಮ ಸರ್ಕಾರದ ವಿರುದ್ಧ ದಾಖಲೆಗಳಿಲ್ಲದೆ ಶೇಕಡ 40ರಷ್ಟು ಕಮಿಷನ್‌ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ವಿರುದ್ಧ ನಾವು ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಿದ್ದೇವೆ’ ಎಂದರು. ‘ಸಿದ್ದರಾಮಯ್ಯ ವಿರುದ್ಧದ ಆರೋಪಕ್ಕೆ ‍ಪುಷ್ಟಿ ನೀಡುವ 10–12 ದಾಖಲೆಗಳನ್ನು ದೂರಿನ ಜತೆ ನೀಡಿದ್ದೇವೆ. ದಾಖಲೆಗಳ ಆಧಾರದಲ್ಲಿ ಕ್ರಮ ಜರುಗಿಸುವುದಾಗಿ ಲೋಕಾಯುಕ್ತರು ಭರವಸೆ ನೀಡಿದ್ದಾರೆ’ ಎಂದರು.

***

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಮೇತ ಕಾಂಗ್ರೆಸ್‌ನವರ ವಿರುದ್ಧ 59 ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿತ್ತು. ಎಸಿಬಿ ಸೃಜಿಸಿ, ಪ್ರಕರಣ ಮುಚ್ಚಿಹಾಕಲು ‘ಬಿ’ ವರದಿ ಹಾಕಿದರು.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ರಾಜ್ಯ ಬಿಜೆಪಿ ಸರ್ಕಾರ ಪಡೆಯುತ್ತಿರುವ ಶೇ 40 ಕಮಿಷನ್ ಉಳಿಸಿದರೆ ಸಾಕು 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಕುಟುಂಬದ ಯಾಜಮಾನಿಗೆ ಪ್ರತಿ ತಿಂಗಳಿಗೆ ₹ 2 ಸಾವಿರ ಕೊಡಬಹುದು
– ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.