ADVERTISEMENT

ರಾಜ್ಯದಲ್ಲಿನ ಕುಡಿಯುವ ನೀರಿನ ಬವಣೆ ನೀಗಿಸಲು ಕಾರ್ಯಪಡೆ ರಚನೆ: ಸಿ.ಎಂ.ಭರವಸೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 10:22 IST
Last Updated 16 ಮಾರ್ಚ್ 2023, 10:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ‘ಬೇಸಿಗೆಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಕೊರತೆಯ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದೇನೆ. ಇದಕ್ಕಾಗಿ ಶೀಘ್ರ ಕಾರ್ಯಪಡೆ ರಚಿಸಿ ಕಾರ್ಯಪ್ರವೃತ್ತರಾಗುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಅವರು ಗುರುವಾರ ಮಾತನಾಡಿದರು.

ಪ್ರತಿಭಟನೆಗಳು ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಚುನಾವಣೆ ಸಮೀಪಿಸಿದಾಗ ಇದೆಲ್ಲ ಸಹಜ’ ಎಂದರು.

ADVERTISEMENT

ವಸತಿ ಸಚಿವ ಸೋಮಣ್ಣ ಅವರು ಪಕ್ಷದ ಮುಖಂಡ ಬಿ.ಎಸ್.ಯಡಿಯೂರಪ್ಪ ಮೇಲೆ ಮುನಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ, ‘ಆ ರೀತಿ ಇಲ್ಲ. ಯಡಿಯೂರಪ್ಪ ಜತೆ ಯಾರಿಗೂ ಭಿನ್ನಾಭಿಪ್ರಾಯ ಇಲ್ಲ. ‘ನನ್ನದು ಮತ್ತು ಯಡಿಯೂರಪ್ಪ ಅವರದ್ದು ತಂದೆ ಮಗನ ಸಂಬಂಧ’ ಎಂದು ಸೋಮಣ್ಣ ಅವರು ಈಗಾಗಲೇ ಹೇಳಿದ್ದಾರೆ. ಯಡಿಯೂರಪ್ಪ ಅವರು ಎಲ್ಲರಿಗಿಂತ ಎತ್ತರದಲ್ಲಿರುವರು. ಎಲ್ಲರನ್ನು ಮಕ್ಕಳಂತೆ ಬೆಳೆಸಿದ ಅವರು ತಂದೆಗೆ ಸಮಾನರು’ ಎಂದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ‘ಕಾಂಗ್ರೆಸ್‌ನವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಮೊಸರಿನಲ್ಲಿ ಕಲ್ಲು ಹುಡುಕುವುದೇ ಅವರ ಜಾಯಮಾನ. ಈ ಹಿಂದೆ ಅವರದೇ ಸರ್ಕಾರವಿದ್ದಾಗ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಗೇಟ್ ಹಾಕಿರಲಿಲ್ಲವೆ. ಬೆಂಗಳೂರಿನ ವಿಮಾನನಿಲ್ದಾಣ ರಸ್ತೆಯಲ್ಲಿ ಟೋಲ್‌ಗೇಟ್ ಹಾಕಿದ್ದು ಅವರ ಸರ್ಕಾರದ ಇದ್ದಾಗ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಕೆಪಿಸಿಸಿ ಅಧ್ಯಕ್ಷರು ಬಳಸಿದ ಶಪದಗಳು ಸಭ್ಯತೆಯ ಎಲ್ಲೆಯನ್ನು ಮೀರಿದ್ದವು. ಈ ರೀತಿಯ ವರ್ತನೆಯನ್ನು ಕನ್ನಡಿಗರು ಒಪ್ಪುವುದಿಲ್ಲ’ ಎಂದರು.

‘ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆ ಮಾಡುವ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದೆ. ಇದನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

‘ನೌಕರರ ಅಹವಾಲುಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಇಂಧನ ಇಲಾಖೆ ನೌಕರರ ಬೇಡಿಕೆ ಸ್ಪಂದಿಸಿ, ಅವರ ವೇತನವನ್ನು ಶೇ.20 ರಷ್ಟು ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸಿ ಶೇ.15 ರಷ್ಟು ವೇತನ ಹೆಚ್ಚು ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದೇವೆ. ಇದಕ್ಕೆ ಅವರೂ ಒಪ್ಪುತ್ತಾರೆ ಎಂಬ ಭರವಸೆ ಇದೆ’ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಶಾಸಕರಾದ ಡಾ .ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್ ಜೊತೆಯಲ್ಲಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.