ADVERTISEMENT

‘ತೌಕ್ತೆ’ ಚಂಡಮಾರುತ: ಕರಾವಳಿಯಲ್ಲಿ ‘ರೆಡ್‌ ಅಲರ್ಟ್‌’

​ಪ್ರಜಾವಾಣಿ ವಾರ್ತೆ
Published 15 ಮೇ 2021, 13:38 IST
Last Updated 15 ಮೇ 2021, 13:38 IST
ಉಳ್ಳಾಲ ಬಳಿಯ ಸಮುದ್ರದಲ್ಲಿ ಅಲೆಗಳ ಅಬ್ಬರ
ಉಳ್ಳಾಲ ಬಳಿಯ ಸಮುದ್ರದಲ್ಲಿ ಅಲೆಗಳ ಅಬ್ಬರ   

ಬೆಂಗಳೂರು: ‘ತೌಕ್ತೆ’ ಚಂಡಮಾರುತದ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಮೇ 20ರವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಚಂಡಮಾರುತ ಪ್ರಸ್ತುತ ಪೂರ್ವ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿದೆ. ಇದು, ಇನ್ನಷ್ಟು ತೀವ್ರಗೊಂಡು ಉತ್ತರ ದಿಕ್ಕಿನೆಡೆಗೆ ಚಲಿಸುವ ಸಾಧ್ಯತೆಗಳಿವೆ. ಮೇ 18ರಂದು ಗುಜರಾತ್‌ ಕರಾವಳಿಯಿಂದ ತೀವ್ರಗೊಳ್ಳಲಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

‘ಚಂಡಮಾರುತದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ. ಅಲ್ಲದೆ, ಒಳನಾಡಿನಲ್ಲೂ ಮುಂದಿನ ಐದು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೇ 16ರಂದು ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಈ ಸಮಯದಲ್ಲಿ ಗರಿಷ್ಠ 20 ಸೆಂ.ಮೀ ಮಳೆಯಾಗುವ ಮುನ್ಸೂಚನೆ ಇದೆ’ ಎಂದು ವಿವರಿಸಿದರು.

ADVERTISEMENT

ಎಲ್ಲೆಲ್ಲಿ ಅಲರ್ಟ್‌: ಮೇ 17ರವರೆಗೆ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಹಾವೇರಿ, ಗದಗ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಮಂಡ್ಯ, ಮೈಸೂರಿಗೆ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ.

ಕರಾವಳಿಯಲ್ಲಿ ಚಂಡಮಾರುತ ತೀವ್ರತೆ ಇರುವುದರಿಂದ ಗಂಟೆಗೆ 70 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಎತ್ತರದ ಅಲೆಗಳೂ ಏಳುತ್ತಿರುವುದರಿಂದ ಮೀನುಗಾರರು ಮುಂದಿನ ಐದೂ ದಿನ ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಮಳೆ–ಎಲ್ಲಿ,ಎಷ್ಟು?: ಮಂಗಳೂರಿನಲ್ಲಿ ಶನಿವಾರ ಗರಿಷ್ಠ 8 ಸೆಂ.ಮೀ ಮಳೆಯಾಗಿದೆ. ಸುಳ್ಯ 5, ಭಾಗಮಂಡಲ 4, ಮೂಡುಬಿದರೆ, ಪುತ್ತೂರು, ಕಾರ್ಕಳ, ವಿರಾಜಪೇಟೆ 3, ಧರ್ಮಸ್ಥಳ, ಸುಬ್ರಹ್ಮಣ್ಯ, ಮಡಿಕೇರಿ, ಹಾಸನ 2, ಬೆಳ್ತಂಗಡಿ, ಕುಂದಾಪುರ, ಅಂಕೋಲಾ ಹಾಗೂ ಕಾರವಾರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.