ADVERTISEMENT

ಕ್ಷಯ ರೋಗ: 1.14 ಕೋಟಿ ಜನರ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 13:30 IST
Last Updated 5 ಡಿಸೆಂಬರ್ 2020, 13:30 IST

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಅಭಿಯಾನವನ್ನು ರಾಜ್ಯದಲ್ಲಿ ಪ್ರಾರಂಭಿಸಿದ್ದು, ಈ ಬಾರಿ 1.14 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿ ಹಾಕಿಕೊಂಡಿದೆ.

ರಾಜ್ಯದಲ್ಲಿ 2017ರಿಂದ ಕ್ಷಯ ರೋಗ ಮತ್ತೆ ಮತ್ತು ಚಿಕಿತ್ಸಾ ಅಭಿಯಾನ ಪ್ರಾರಂಭವಾಗಿದ್ದು, ಈವರೆಗೆ 7 ಹಂತಗಳು ಪೂರ್ಣಗೊಂಡಿವೆ. 3.29 ಕೋಟಿ ಜನರನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ 5.18 ಲಕ್ಷ ಮಂದಿಯಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡ ಕಾರಣ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 14,333 ಮಂದಿ ಕ್ಷಯ ರೋಗಿಗಳಾಗಿರುವುದು ದೃಢಪಟ್ಟಿದೆ. ಈಗ 8 ನೇ ಹಂತದಲ್ಲಿ ಅಭಿಯಾನ ಪ್ರಾರಂಭಿಸಲಾಗಿದೆ.

ಡಿ.31ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಸಲಾಗುತ್ತದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ದುರ್ಬಲಗೊಂಡಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮನೆ ಮನೆಗೆ ಭೇಟಿ ನೀಡಲು 16,999 ತಂಡಗಳನ್ನು ರೂಪಿಸಲಾಗಿದ್ದು, ಇದರಲ್ಲಿ ಒಟ್ಟು 32,769 ಸದಸ್ಯರಿದ್ದಾರೆ. ಮನೆಗಳಿಗೆ ತೆರಳುವ ಆರೋಗ್ಯ ಸಿಬ್ಬಂದಿ, ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕಫ ಪರೀಕ್ಷೆ ನಡೆಸುತ್ತಾರೆ. ಈ ಪರೀಕ್ಷೆಯಲ್ಲಿ ರೋಗ ಇರುವುದು ದೃಢಪಟ್ಟಲ್ಲಿ ತಕ್ಷಣವೇ ಚಿಕಿತ್ಸೆಗೆ ತೆರಳಲು ಸೂಚಿಸುತ್ತಾರೆ.

ADVERTISEMENT

ಉಚಿತ ಚಿಕಿತ್ಸೆ: ಈ ಅಭಿಯಾನದಲ್ಲಿ ಇಲಾಖೆಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರನ್ನು ಬಳಸಿಕೊಳ್ಳಲಾಗುತ್ತಿದೆ. ಆರೋಗ್ಯ ಸೇವಾ ಸೌಲಭ್ಯಗಳು ತಲುಪದಂತ ಪ್ರದೇಶಗಳ ನಿವಾಸಿಗಳು, ಬುಡಕಟ್ಟು ಸಮುದಾಯಗಳು, ಗಾರೆ ಕೆಲಸಗಾರರು, ವೃದ್ಧಾಶ್ರಮದಲ್ಲಿ ಇರುವವರು, ಕಟ್ಟಡ ಕಾರ್ಮಿಕರು, ಮಾದಕ ವ್ಯಸನಿಗಳು ಸೇರಿದಂತೆ ವಿವಿಧ ವರ್ಗದವರಿಗೆ ತಪಾಸಣೆ ನಡೆಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

‘ಕೇಂದ್ರ ಸರ್ಕಾರವು 2025ರ ವೇಳೆಗೆ ‘ಕ್ಷಯ ಮುಕ್ತ ಭಾರತ’ವನ್ನು ನಿರ್ಮಿಸುವ ಗುರಿ ಹೊಂದಿದ್ದು, ರೋಗ ಪತ್ತೆಯಾದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮೈಕೋ ಬ್ಯಾಕ್ಟೀರಿಯಂ ಎಂಬ ರೋಗಾಣುವಿನಿಂದ ಕ್ಷಯ ರೋಗ ಗಾಳಿಯ ಮೂಲಕ ಹರಡುತ್ತದೆ. ಇದು ಶ್ವಾಸಕೋಶವನ್ನು ಹೆಚ್ಚಾಗಿ ಬಾಧಿಸುತ್ತದೆ. ಕೂದಲು ಮತ್ತು ಉಗುರುಗಳನ್ನು ಹೊರತುಪಡಿಸಿ ದೇಹದ ಯಾವುದೇ ಭಾಗಕ್ಕೆ ರೋಗವು ತಗುಲಬಹುದು. ಲಕ್ಷಣವು ಕಾಣಿಸಿಕೊಂಡ ಕೂಡಲೇ ರೋಗವನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ವಾಸಿ ಮಾಡಬಹುದು’ ಎಂದು ಇಲಾಖೆ ಪ್ರಕಟಣೆಯಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.