ADVERTISEMENT

ಕೋವಿಡ್: ಚೇತರಿಸಿಕೊಂಡವರಿಗೆ ಟಿಬಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 15:59 IST
Last Updated 4 ಆಗಸ್ಟ್ 2021, 15:59 IST
   

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಕ್ಷಯ ರೋಗ (ಟಿಬಿ) ಕಾಣಿಸಿಕೊಳ್ಳಲಿದೆಯೇ ಎನ್ನುವುದರ ಬಗ್ಗೆ ಅಧ್ಯಯನ ನಡೆಸಲು ಮುಂದಾಗಿರುವ ಆರೋಗ್ಯ ಇಲಾಖೆ, ಇದೇ 16ರಿಂದ 31ರವರೆಗೆ ಟಿಬಿ ತಪಾಸಣೆ ಅಭಿಯಾನ ಹಮ್ಮಿಕೊಂಡಿದೆ.

‘ಕೊರೊನಾ ಸೋಂಕಿತರು ಗುಣಮುಖರಾದ ಬಳಿಕ ಕ್ಷಯ ರೋಗ ಕಾಣಿಸಿಕೊಳ್ಳುತ್ತಿದೆ’ ಎಂಬ ವದಂತಿಗಳು ಹರಿದಾಡಿದ್ದವು. ಹೀಗಾಗಿ, ರಾಜ್ಯದಾದ್ಯಂತ 15 ದಿನಗಳ ಅವಧಿಯಲ್ಲಿ ತಪಾಸಣೆ ನಡೆಸಿ, ಲಕ್ಷಣಗಳು ಗೋಚರಿಸಿದವರಿಗೆ ಪರೀಕ್ಷೆ ನಡೆಸಲಾಗುತ್ತದೆ.

‘ಕೊರೊನಾ ಮತ್ತು ಕ್ಷಯ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಲ್ಲಿ ಸಾಮ್ಯತೆಯಿದೆ. ಆದ್ದರಿಂದ ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಪರೀಕ್ಷೆ ಮಾಡಲಾಗುತ್ತದೆ. ಮೂರು ವಾರಗಳಿಂದ ನಿರಂತರ ಕೆಮ್ಮು, ಎರಡು ವಾರಗಳಿಂದ ನಿರಂತರ ಜ್ವರ, ಕೆಮ್ಮಿದಾಗ ರಕ್ತ ಕಾಣಿಸಿಕೊಳ್ಳುವಿಕೆ ಹಾಗೂ ತೂಕ ಇಳಿಕೆಯಾಗುವಿಕೆ ಲಕ್ಷಣಗಳು ಇರುವವರ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗುತ್ತದೆ. ಬಳಿಕ ಹತ್ತಿರದ ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಹೆಚ್ಚಿನ ತಪಾಸಣೆ ನಡೆಸಲಾಗುತ್ತದೆ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಡಾ. ರಮೇಶ್ ರೆಡ್ಡಿ ತಿಳಿಸಿದರು.

ADVERTISEMENT

‘ಕ್ಷಯ ರೋಗ ತಗಲಿರುವುದು ಖಚಿತಪಟ್ಟಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಈ ತಪಾಸಣೆ ಕಾರ್ಯಕ್ಕೆ ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತದೆ. ಅವರು ಮನೆ ಮನೆಗೆ ಭೇಟಿ ನೀಡಿ, ಕೋವಿಡ್‌ನಿಂದ ಗುಣಮುಖರಾದವರ ಆರೋಗ್ಯದ ಮಾಹಿತಿ ಸಂಗ್ರಹಿಸುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.