ADVERTISEMENT

ಟ್ಯೂಷನ್‌ ಕ್ಲಾಸ್‌ನಲ್ಲೇ ಅತಿಥಿ ಶಿಕ್ಷಕ ಆತ್ಮಹತ್ಯೆ

ಸಿಗದ ಶಿಕ್ಷಕ ಹುದ್ದೆಯಿಂದ ಬೇಸರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 23:55 IST
Last Updated 5 ಡಿಸೆಂಬರ್ 2020, 23:55 IST
ಮಂಚೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ಮುಖಂಡರ ಮನವೊಲಿಸಿದ ಡಿವೈಎಸ್‌ಪಿ ರವಿಶಂಕರ್
ಮಂಚೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ಮುಖಂಡರ ಮನವೊಲಿಸಿದ ಡಿವೈಎಸ್‌ಪಿ ರವಿಶಂಕರ್   

ಗೌರಿಬಿದನೂರು:ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ಶುಕ್ರವಾರ ಖಾಸಗಿ ಶಾಲೆಯ ಅತಿಥಿ ಶಿಕ್ಷಕರೊಬ್ಬರು ಟ್ಯೂಷನ್‌ ಕ್ಲಾಸ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕನಗಾನಕೊಪ್ಪ ಗ್ರಾಮದ ನಿವಾಸಿ ಚಂದ್ರಶೇಖರ್ (25) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ಮಂಚೇನಹಳ್ಳಿಯ ಆಚಾರ್ಯ ಸಂಯುಕ್ತ ಪ್ರೌಢಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ವರ್ಷಕ್ಕೆ ಸೀಮಿತವಾದಂತೆ ಅತಿಥಿ ಶಿಕ್ಷಕರಾಗಿ ಅವರು ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

‘ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ. ನನ್ನೆಲ್ಲಾ ಪ್ರೀತಿ ಪಾತ್ರರಲ್ಲಿ ಕ್ಷಮೆಯಾಚಿಸುತ್ತೇನೆ. ಸೇವೆ ಕಾಯಂ ಮಾಡಿಕೊಳ್ಳದ ಮಂಚೇನಹಳ್ಳಿ ಆಚಾರ್ಯ ಪ್ರೌಢಶಾಲೆ ಆಡಳಿತ ಮಂಡಳಿಯವರೇ ನನ್ನ ಸಾವಿಗೆ ಕಾರಣ‘ ಎಂದುಶುಕ್ರವಾರ ಸಂಜೆ ಟ್ಯೂಷನ್ ಕ್ಲಾಸ್‌ನಲ್ಲಿ ‌ಬ್ಲಾಕ್ ಬೋರ್ಡ್ ಮೇಲೆ ಬರೆದು ನೇಣಿಗೆ ಶರಣಾಗಿದ್ದಾರೆ.

ADVERTISEMENT

ಈ ವರ್ಷ ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತರಗತಿ ಆರಂಭವಾಗದ ಕಾರಣ ಇವರನ್ನು ಅತಿಥಿ ಶಿಕ್ಷಕರಾಗಿ ಮುಂದುವರಿಸಿರಲಿಲ್ಲ. ಹೀಗಾಗಿ ಇವರು ತಮ್ಮ ಜೀವನೋಪಾಯಕ್ಕಾಗಿ ಮಂಚೇನಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ಟ್ಯೂಷನ್ ನಡೆಸುತ್ತಿದ್ದರು.

‘ಎಂಟು ವರ್ಷಗಳಿಂದ ಮಂಚೇನ ಹಳ್ಳಿಯ ಆಚಾರ್ಯ ಅನುದಾನಿತ ಪ್ರೌಢಶಾಲೆಯಲ್ಲಿಚಂದ್ರಶೇಖರ್ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೇರೊಬ್ಬರನ್ನು ಈಚೆಗೆ ಶಿಕ್ಷಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಇದರಿಂದ ಮನನೊಂದ ನಮ್ಮ ಮಗ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾನೆ’ ಎಂದು ಪೋಷಕರು ಆರೋಪಿಸಿದ್ದಾರೆ. ಮಂಚೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ: ಶಿಕ್ಷಕ ಚಂದ್ರಶೇಖರ್ ಸಾವಿಗೆ ಶಾಲಾ ಆಡಳಿತ ಮಂಡಳಿಯೇ ಕಾರಣ ಎಂದು ಆರೋಪಿಸಿ ಸ್ಥಳೀಯ ಮುಖಂಡರು ಶನಿವಾರ ಮಂಚೇನಹಳ್ಳಿಯ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಮೃತ ಶಿಕ್ಷಕನ ಪತ್ನಿಗೆ ಶಾಲೆಯಲ್ಲಿ ಹುದ್ದೆ ನೀಡುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.