ADVERTISEMENT

3 ವರ್ಷ ಕೆಲಸ ಮಾಡಿದ್ದರೂ ವರ್ಗಕ್ಕೆ ಅರ್ಹತೆ

ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 18:38 IST
Last Updated 17 ಡಿಸೆಂಬರ್ 2018, 18:38 IST

ಬೆಳಗಾವಿ: ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಬೇಕಾದರೆ ಒಂದು ವಲಯದಲ್ಲಿ ಕನಿಷ್ಠ ಐದು ವರ್ಷ ಪೂರೈಸಿರಬೇಕು ಎಂಬ ನಿಯಮವನ್ನು ಮೂರು ವರ್ಷಕ್ಕೆ ಇಳಿಸುವ ಮೂಲಕ ಈ ಸಮುದಾಯಕ್ಕೆ ಸಿಹಿ ಸುದ್ದಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈಉದ್ದೇಶದಿಂದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ –2007ಕ್ಕೆ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದ್ದು, ಇಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಿದೆ.

ಕೋರಿಕೆ ವರ್ಗಾವಣೆಯಡಿ ಅರ್ಜಿ ಸಲ್ಲಿಸಲು ಯಾವುದೇ ವಲಯ( ಸಿ–ಗ್ರಾಮೀಣ, ಬಿ–ನಗರದಿಂದ 10 ಕಿ.ಮೀ ದೂರ, ಎ–ನಗರ ಪ್ರದೇಶ) ದಲ್ಲಿ ಐದು ವರ್ಷ ಕೆಲಸ ಮಾಡಲೇಬೇಕಾಗಿತ್ತು. ಇದರಿಂದ ತೊಂದರೆಯಾಗಿದೆ ಎಂದೂ ಶಿಕ್ಷಕರ ಸಂಘ ದೂರಿತ್ತು. ಹೀಗಾಗಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

ADVERTISEMENT

ಆದರೆ, ಪದವಿಪೂರ್ವ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳನ್ನು ‘ನಗರ‘ ವ್ಯಾಪ್ತಿ ಎಂದು ಪರಿಗಣಿಸುವುದಿಲ್ಲ. ಶಿಕ್ಷಕ ದಂಪತಿ ಪೈಕಿ ಪತಿ, ಪತ್ನಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಅಲ್ಲಿ ದೊರೆಯದಿದ್ದರೆ ಮತ್ತು ಪತಿ–ಪತ್ನಿ ಪ್ರಕರಣದಲ್ಲಿ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಣೆಗೆ ಅನುವು ಮಾಡಿಕೊಡುವ ಉದ್ದೇಶ
ದಿಂದ, ಅಂತಹವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವ ಪ್ರಸ್ತಾವವೂ ಮಸೂದೆಯಲ್ಲಿದೆ.

ಪತಿ–ಪತ್ನಿ ಪ್ರಕರಣದಡಿ ವರ್ಗಾವಣೆ ಬಯಸಬೇಕಾದರೆ ಈ ಮೊದಲು ಇಬ್ಬರೂ ಸರ್ಕಾರಿ ನೌಕರರಾಗಿರಬೇಕು ಎಂಬ ನಿಯಮವಿತ್ತು. ಈಗ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದವರಿಗೂ ಇದು ಅನ್ವಯಿಸಲಿದೆ.

ಕಡ್ಡಾಯ ವರ್ಗಾವಣೆ:‘ಎ’ ವಲಯದಲ್ಲಿ ಗರಿಷ್ಠ ಸೇವಾ ಅವಧಿ ಪೂರ್ಣಗೊಳಿಸಿದ ಮತ್ತು ಎರಡು ವರ್ಷಗಳಿಗಿಂತ ಹೆಚ್ಚು ಸೇವೆ ಉಳಿದಿರುವ ಶಿಕ್ಷಕರಿಗೆ ‘ಸಿ’ ವಲಯದ ಹುದ್ದೆಗೆ ವರ್ಗಾವಣೆ ಕಡ್ಡಾಯ. ಆದರೆ, ಶಿಕ್ಷಕರ ಅಥವಾ ನೌಕರರ ಸಂಘದ ಪದಾಧಿಕಾರಿ
ಯಾಗಿರುವ ಶಿಕ್ಷಕ, ಅವಿವಾಹಿತ ಶಿಕ್ಷಕಿ, ವಿಧವೆ ಮತ್ತು ಶೇ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ಶಿಕ್ಷಕರಿಗೆ ಇದರಿಂದ ವಿನಾಯಿತಿ ಸಿಗಲಿದೆ.

ಮಸೂದೆಯ ಇತರ ಅಂಶಗಳು

* ಕೌನ್ಸೆಲಿಂಗ್‌ ಪ್ರಕ್ರಿಯೆಯ ಸಂದರ್ಭದಲ್ಲಿ ಹುದ್ದೆ ತುಂಬಲೇಬೇಕಾದ ಶಾಲೆಯನ್ನು ಯಾವೊಬ್ಬ ಶಿಕ್ಷಕನೂ ಆಯ್ಕೆ ಮಾಡಿಕೊಳ್ಳದಿದ್ದರೆ ಇತರ ವಲಯದಲ್ಲಿ ಕನಿಷ್ಠ ಸೇವಾ ಅವಧಿ (ಒಂದು ವಲಯದಲ್ಲಿ ವಿವಿಧ ವೃಂದಗಳಲ್ಲಿ ಒಟ್ಟಾರೆಯಾಗಿ 5 ವರ್ಷ ಸತತ ಸೇವೆ) ಪೂರೈಸಿದ ಶಿಕ್ಷಕರನ್ನು ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ.

* ಒಂದು ಜ್ಯೇಷ್ಠತಾ ಘಟಕದಿಂದ ಇನ್ನೊಂದು ಜ್ಯೇಷ್ಠತಾ ಘಟಕಕ್ಕೆ ಶಿಕ್ಷಕರ ವರ್ಗಾವಣೆಗೆ ನಿಷೇಧ.

* ಶಿಕ್ಷಕರ ಜ್ಯೇಷ್ಠತಾ ಘಟಕದ ಹೊರಗಿನ ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ದಿಮೆಯ ಹುದ್ದೆಯಲ್ಲಿರುವ ನೌಕರನನ್ನು ಶಿಕ್ಷಕರು ವಿವಾಹವಾದರೆ ಅಂಥವರಿಗೆ ಸೇವಾವಧಿಯ ಹೊರತಾಗಿಯೂ ವರ್ಗಾವಣೆ

* ಶಿಕ್ಷಕ ಕೋರಿಕೆಯಂತೆ ಕೌನ್ಸೆಲಿಂಗ್‌ ಪ್ರಕ್ರಿಯೆಯ ಮೂಲಕ ಜ್ಯೇಷ್ಠತೆ ಘಟಕದ ಹೊರಗೆ ಆತನ ಸಂಗಾತಿ ಕೆಲಸ ಮಾಡುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿನ ಸ್ಥಳ ಅಥವಾ ಹುದ್ದೆಗೆ (ನಗರ ಪ್ರದೇಶ ಹೊರತು‍ಪಡಿಸಿ) ವರ್ಗಾವಣೆಗೆ ಅವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.