ADVERTISEMENT

ಶಿಕ್ಷಕರ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 19:30 IST
Last Updated 18 ಸೆಪ್ಟೆಂಬರ್ 2018, 19:30 IST
   

ಬೆಂಗಳೂರು: 2017–18ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್‌ ಮೂಲಕ ನಡೆಸಲು ಪರಿಷ್ಕೃತ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ, ಕಡ್ಡಾಯ ವರ್ಗಾವಣೆ ಹಾಗೂ ಕೋರಿಕೆ, ಮತ್ತು ಪರಸ್ಪರ ವರ್ಗಾವಣೆಯ ಕುರಿತು ಇದರಲ್ಲಿ ಕೆಲವೊಂದು ಪರಿಷ್ಕರಣೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಈಗಾಗಲೇ ಪೂರ್ಣಗೊಂಡಿದ್ದು, ಒಂದೆರಡು ದಿನಗಳಲ್ಲಿ ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪಟ್ಟಿಯೂ ಪ್ರಕಟಗೊಳ್ಳಲಿದೆ. ಸೆಪ್ಟೆಂಬರ್‌ 27 ಮತ್ತು 28 ರಂದು ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡಯಲಿದೆ. ಮೊದಲನೇ ಹಂತದಲ್ಲಿ ತಾಲ್ಲೂಕು ವ್ಯಾಪ್ತಿಗೆ ಹಾಗೂ ಎರಡನೇ ಹಂತದಲ್ಲಿ ಜಿಲ್ಲಾ ವ್ಯಾಪ್ತಿಗೆ ನಡೆಸಲಾಗುತ್ತದೆ.

ADVERTISEMENT

ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಸಂಬಂಧಿಸಿದಂತೆ ಸೆ.19ರಂದು ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಸೆ.19ರಿಂದ 25ರವರೆಗೆ ಆಕ್ಷೇಪ ಸಲ್ಲಿಸಬಹುದಾಗಿದೆ. ಸೆ.19ರಿಂದ 26ರವರೆಗೆ ಬಿಇಒ ಹಂತದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಸೆ.27ರಂದು ವರ್ಗಾವಣೆಗೆ ಅನುಮೋದಿಸಿ ಉಪನಿರ್ದೇಶಕರಿಗೆ ದಾಖಲೆಗಳೊಂದಿಗೆ ಸಲ್ಲಿಸಲಾಗುತ್ತದೆ.

ಕಡ್ಡಾಯ ವರ್ಗಾವಣೆ: ‘ಎ’ ವಲಯದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪಟ್ಟಿಯನ್ನು ವರ್ಗಾವಣೆಗೆ ನಿಗದಿಪಡಿಸಿದ ಮಿತಿಗೊಳಪಟ್ಟ ಸಂಖ್ಯೆಯನ್ನು ಗಮನಿಸಿ ಪ್ರಕಟಿಸಲಾಗುತ್ತದೆ. ಸೆ.29ರಿಂದ ಅಕ್ಟೋಬರ್‌ 4ರವರೆಗೆ ಆಕ್ಷೇಪ ಆಹ್ವಾನಿಸಲಾಗಿದೆ. ಹೆಚ್ಚುವರಿ ಶಿಕ್ಷಕರ ಮರುನಿಯುಕ್ತಿ ಪೂರ್ಣಗೊಳಿಸಿದ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಿ ಸೆ.29ರಿಂದ ಅಕ್ಟೋಬರ್‌ 5ರವರಗೆ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಕೋರಿಕೆ ವರ್ಗಾವಣೆಗೆ ಲಭ್ಯವಿರುವ ಎಲ್ಲಾ ಖಾಲಿ ಹುದ್ದೆಗಳನ್ನೂ ಅಕ್ಟೋಬರ್‌ 6ರಂದು ಪ್ರಕಟಿಸಲಾಗುತ್ತದೆ. ‘ಎ’ ವಲಯದ ಶಿಕ್ಷಕರನ್ನು ‘ಬಿ’ ವಲಯಕ್ಕೆ ಹಾಗೂ ‘ಸಿ’ ವಲಯಕ್ಕೆ ಅಕ್ಟೋಬರ್‌ 10ರಿಂದ 15ರವರೆಗೆ ಕೌನ್ಸೆಲಿಂಗ್‌ ನಡೆಯಲಿದೆ. ಕ್ರಿಮಿನಲ್‌, ಶಿಸ್ತು ಪ್ರಕರಣಗಳನ್ನು ಎದುರಿಸುತ್ತಿರುವ ಶಿಕ್ಷಕರ ವರ್ಗಾವಣೆ ಅಕ್ಟೋಬರ್‌ 16ರಂದು ನಡೆಯಲಿದೆ.

ಪರಸ್ಪರ ವರ್ಗಾವಣೆಗಳ ಮತ್ತು ಕೋರಿಕೆ ವರ್ಗಾವಣೆಗಳ ಅಂತಿಮ ಪಟ್ಟಿಯನ್ನು ಸೆಪ್ಟೆಂಬರ್‌ 30ರಂದು ಪ್ರಕಟಿಸಲಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದವರಿಗೆ ‘ಬಿ’ ವಲಯದ ಶಿಕ್ಷಕರು ‘ಎ’ ವಲಯಕ್ಕೆ, ‘ಸಿ’ ವಲಯದ ಶಿಕ್ಷಕರನ್ನು ‘ಎ’ ವಲಯಕ್ಕೆ ಹಾಗೂ ‘ಸಿ’ ವಲಯದ ಶಿಕ್ಷಕರನ್ನು ‘ಬಿ’ ವಲಯಕ್ಕೆ ವರ್ಗಾವಣೆ ಕೌನ್ಸೆಲಿಂಗ್‌ ಅಕ್ಟೋಬರ್‌ 3ರಿಂದ 10ರವರೆಗೆ ನಡೆಯಲಿದೆ.

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಹಿರಿಯ ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಅಕ್ಟೋಬರ್‌ 11 ಮತ್ತು 12 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.