ADVERTISEMENT

2014ರ ಶಿಕ್ಷಕರ ನೇಮಕಾತಿ ಅಕ್ರಮ: ಸಿಐಡಿ ತನಿಖೆ- ಸಚಿವ ನಾಗೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 19:54 IST
Last Updated 20 ಸೆಪ್ಟೆಂಬರ್ 2022, 19:54 IST

ಬೆಂಗಳೂರು: 2014–15ರ ಸಾಲಿನಲ್ಲಿ ಅರ್ಜಿ ಪಡೆಯದೇ, ಪರೀಕ್ಷೆ ಮಾಡದೇ ಶಿಕ್ಷಕರನ್ನು ನೇಮಿಸಿರುವ ಪ್ರಕರಣದ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದ್ದು, ಬೆಂಗಳೂರು ವಿಭಾಗದಲ್ಲಿ 16 ಶಿಕ್ಷಕರ ಬಂಧನವಾಗಿದೆ. ಇಂತಹ ಇನ್ನೂ 35 ರಿಂದ 40 ಶಿಕ್ಷಕರ ಮಾಹಿತಿ ಸಿಕ್ಕಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಂಗಳವಾರ ತಿಳಿಸಿದರು.

ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಪಿ.ರಾಜೀವ್‌ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಅಲ್ಲದೇ, ಉಳಿದ ವಿಭಾಗಗಳಲ್ಲಿ ನಡೆದಿರುವ ನೇಮಕಾತಿಯನ್ನೂ ತನಿಖೆಗೆ ಒಳಪಡಿಸ ಲಾಗುವುದು ಎಂದು ಹೇಳಿದರು.

‘ನೇಮಕಾತಿಯಲ್ಲಿ ಅಕ್ರಮ ನಡೆದಿ ರುವ ವಿಚಾರ ಗಮನಕ್ಕೆ ಬಂದಾಗ, ಎಸ್ಎಸ್‌ಎಲ್‌ಸಿ ಮಂಡಳಿಯ
ನಿರ್ದೇಶಕರಿಂದಲೇ ತನಿಖೆ ನಡೆಸಿದೆವು. ತನಿಖೆಯಿಂದ ಅಕ್ರಮ ನಡೆದಿರುವುದು ದೃಢಪಟ್ಟ ಬಳಿಕ ಪ್ರಕರಣವನ್ನು
ಸಿಐಡಿಗೆ ವಹಿಸಲಾಯಿತು. ಇವರು ಅರ್ಜಿಯೂ ಹಾಕದೇ, ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಬರೆಯದೇ ನೇಮಕಾತಿ ಪಡೆದಿದ್ದಾರೆ’ ಎಂದು ನಾಗೇಶ್‌ ತಿಳಿಸಿದರು.

ADVERTISEMENT

ವಿಷಯ ಪ್ರಸ್ತಾಪಿಸಿದ ಪಿ.ರಾಜೀವ್ ಅವರು, ‘ಸಿಇಟಿ ಪರೀಕ್ಷೆಯನ್ನೂ ಬರೆಯದೇ ನೇರ ನೇಮಕಾತಿ ಆದೇಶ ಪಡೆದು ಶಿಕ್ಷಕ ಹುದ್ದೆ ಪಡೆದಿರುವುದು ದೊಡ್ಡ ಹಗರಣ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ಹೇಳಿದರು.

ಎ.ಎಸ್‌.ಪಾಟೀಲ ನಡಹಳ್ಳಿ ಮಾತ ನಾಡಿ, ‘ಇದೊಂದು ದೊಡ್ಡ ಹಗರಣ. ಇದರಲ್ಲಿ ತಪ್ಪಿತಸ್ಥರು ಯಾರು ಎಂಬುದು ಬಯಲಿಗೆ ತರಬೇಕು ಮತ್ತು
ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಹಗರಣ ನಡೆದಿದ್ದರೆ ಇಷ್ಟು ದಿನ ಸುಮ್ಮನೆ ಇದ್ದದ್ದು ಯಾಕೆ’ ಎಂದು ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌ ಪ್ರಶ್ನಿಸಿದರು.

ಆಗ ಬಿಜೆಪಿ ಸದಸ್ಯರು ‘ಈ ಅಕ್ರಮದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಪಟ್ಟುಹಿಡಿದರು. ಇದಕ್ಕೆ
ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ನಿಮ್ಮ ಬಳಿ ಇರುವ ಮಾಹಿತಿಗಳೆಲ್ಲವನ್ನು ಕೊಡಿ, ಎಲ್ಲವನ್ನು ಸೇರಿಸಿ ತನಿಖೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.