ADVERTISEMENT

16,066 ಶಿಕ್ಷಕರ ವರ್ಗಾವಣೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 18:22 IST
Last Updated 3 ಸೆಪ್ಟೆಂಬರ್ 2019, 18:22 IST

ಬೆಂಗಳೂರು: 2017–18 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಈ ವರ್ಷ ಆರಂಭಿಸಿದ್ದು, ಒಟ್ಟು 16,066 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಆಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

ಹಿರಿಯ ಅಧಿಕಾರಿ ಜತೆಗಿನ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2018–19 ರ ಸಾಲಿನ ವರ್ಗಾವಣೆಯನ್ನು ಮುಂದಿನ ಶೈಕ್ಷಣಿಕ ವರ್ಷ ಹೊಸ ವರ್ಗಾವಣೆ ನಿಯಮಾವಳಿಗೆ ಅನುಗುಣವಾಗಿಯೇ ನಡೆಸಲಾಗುವುದು ಎಂದರು.

ಕಡ್ಡಾಯ ವರ್ಗಾವಣೆ ನಿಯಮದಡಿ 4,260 ಶಿಕ್ಷಕರ ವರ್ಗಾವಣೆ ಆಗಬೇಕಾಗಿದೆ. ಪರಸ್ಪರ ಕೋರಿಕೆಯ ಮೇರೆಗೆ 3,777 ಶಿಕ್ಷಕರ ವರ್ಗಾವಣೆ ಆಗಬೇಕಾಗಿದೆ. ಅಂತರಘಟಕದಡಿ 14,076 ಶಿಕ್ಷಕರ ವರ್ಗಾವಣೆಗೆ ಕೋರಿಕೆ ಬಂದಿದ್ದು, ಈ ಬಗ್ಗೆ ನಿರ್ಧಾರ ತೆಗೆದು
ಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಮೊದಲ ದಿನವೇ ಪಠ್ಯಪುಸ್ತಕ

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷದ ಮೊದಲ ದಿನವೇ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರ ಸಿಗಲಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

‘ಪಠ್ಯ ಪುಸ್ತಕ ಪರಿಷ್ಕರಣೆ ಮುಂತಾದ ವಿಚಾರ ನಮ್ಮ ಆದ್ಯತೆ ಅಲ್ಲ’ ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ‘ಶಾಲೆಯ ಆರಂಭದ ದಿನವೇ ಮಕ್ಕಳು ನಲಿಯುತ್ತಾ ಶಾಲೆಗೆ ಹೋಗಬೇಕು. ಆ ದಿನವೇ ಅವರಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ದೊರಕುವಂತೆ ಮಾಡುವುದು ಮುಖ್ಯ ಉದ್ದೇಶ’ ಎಂದರು.

10 ಸಾವಿರ ಶಿಕ್ಷಕರಿಗೆ ನೇಮಕ ಆದೇಶ

ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿರುವ 10 ಸಾವಿರ ಶಿಕ್ಷಕರಿಗೆ ಈ ತಿಂಗಳ ಕೊನೆಯೊಳಗೆ ನೇಮಕಾತಿ ಆದೇಶ ಪತ್ರ ನೀಡಲಾಗುವುದು ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ಈ ನೇಮಕಾತಿಯಿಂದ ಶಿಕ್ಷಕರ ಕೊರತೆ ನೀಗುತ್ತದೆ. ಆದೇಶ ಪತ್ರ ಪಡೆದ ತಕ್ಷಣ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.