ADVERTISEMENT

ಶಿಕ್ಷಕರ ವರ್ಗಾವಣೆ ಇನ್ನೂ ಅತಂತ್ರ

ಸಚಿವರಿಂದ ಸಭೆ–ಬಗೆಹರಿಯದ ಬಿಕ್ಕಟ್ಟು: ಗ್ರಾಮೀಣ ಶಿಕ್ಷಕರಿಂದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 20:00 IST
Last Updated 30 ಆಗಸ್ಟ್ 2019, 20:00 IST
   

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಕ್ಕೆ ರಾಜ್ಯದ ಗ್ರಾಮೀಣ ಭಾಗದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದರೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

‘ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ.ಸೆಪ್ಟೆಂಬರ್‌ 3ರಂದು ವರ್ಗಾವಣೆ ಕುರಿತಂತೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಸಚಿವ ಎಸ್‌.ಸುರೇಶ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಸಭೆಯ ನಡುವೆಯೇ ಸಚಿವರನ್ನು ಭೇಟಿ ಮಾಡಿದ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ನಗರ ಪ್ರದೇಶಗಳ ಶಿಕ್ಷಕರ ಒತ್ತಡಕ್ಕೆ ಮಣಿದು ವರ್ಗಾವಣೆ ಪ್ರಕ್ರಿಯೆಯನ್ನು ದಿಢೀರ್‌ ರದ್ದುಪಡಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸೆ.3ರಂದು ವರ್ಗಾವಣೆ ಆದೇಶ ಹೊರಬೀಳದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

‘ವರ್ಗಾವಣೆ ಕಾಯ್ದೆಯಲ್ಲಿ ಹಲವಾರು ಲೋಪದೋಷಗಳಿದ್ದು, ಅದನ್ನು ಮುಂದಿನ ಅಧಿವೇಶನದಲ್ಲಿ ಸರಿಪಡಿಸಬಹುದು, ಆದರೆ ಈಗಾಗಲೇ ಆರಂಭಿಸಲಾದ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಬೇಕು’ ಎಂದು ಸಂಘದ ಅಧ್ಯಕ್ಷ ಅಶೋಕ ಎಂ.ಸಜ್ಜನ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಿ.ಉಪ್ಪಿನ ಒತ್ತಾಯಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ಆಯುಕ್ತ ಡಾ.ಕೆ.ಜಿ.ಜಗದೀಶ್‌, ಸರ್ವಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಅವರು ಇದುವರೆಗೆ ನಡೆದಿರುವ ವರ್ಗಾವಣೆ ಪ್ರಕ್ರಿಯೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು.

ಹಿಂದಿ ಶಿಕ್ಷಕರಿಗೆ ಅನ್ಯಾಯ

ವರ್ಗಾವಣೆಯಲ್ಲಿ ಸಿ ಆಂಡ್‌ ಆರ್ ನಿಯಮದಿಂದ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ತುಂಬಾ ಅನ್ಯಾಯವಾಗಿದ್ದು,ವರ್ಗಾವಣೆಯಲ್ಲಿ ಎಲ್ಲಾ ಶಿಕ್ಷಕರಂತೆ ಇವರಿಗೂ ಸಹ ಅವಕಾಶ ಮಾಡಿಕೊಡಬೇಕು, ಈ ಬಾರಿಯೇ ಇದು ನಡೆಯಬೇಕು ಎಂದು ಹಲವಾರು ಹಿಂದಿ ಶಿಕ್ಷಕರು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಪ್ರಮುಖ ಸೂಚನೆಗಳು

ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭದ ದಿನವೇ ಸಮವಸ್ತ್ರ ಮತ್ತುಪಠ್ಯಪುಸ್ತಕಗಳನ್ನು ನೀಡಬೇಕು, ಮಕ್ಕಳಿಗೆ ಗುಣಮಟ್ಟದ ಬೈಸಿಕಲ್‌ ನೀಡಬೇಕು, ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಮನೆ-ಮಠ ಕಳೆದುಕೊಂಡು ಸಂತ್ತಸ್ತರಾದ ಕುಟುಂಬಗಳ ವಿದ್ಯಾರ್ಥಿಗಳಿಗೆ 11 ಲಕ್ಷ ಪುಸ್ತಕ, ನೋಟ್‍ಬುಕ್, ಪೆನ್ ಸೇರಿದಂತೆ ಪಠ್ಯೋಪಕರಣಗಳನ್ನು ಕೂಡಲೇ ನೀಡಬೇಕು, ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆವಾರಾಂತ್ಯದ ಪಾಠಕ್ಕೆ ಅವಕಾಶ ಕಲ್ಪಿಸಬೇಕು,ಶಿಕ್ಷಕರ ನೇಮಕಾತಿ ವಿಧಾನವನ್ನು ಚುರುಕುಗೊಳಿಸಬೇಕು.

***

ನನ್ನ ಪತಿ ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ನಲ್ಲಿದ್ದಾರೆ. ವರ್ಗಾವಣೆ ಆಗುತ್ತದೆ ಎಂದು ಆಶಿಸಿ ಊರಿಗೆ ಬಂದಿದ್ದರು. ರದ್ದಾಗಿದ್ದರಿಂದ ಕಣ್ಣೀರಿಡುತ್ತಾ ವಾಪಸ್‌ ಹೋಗಿದ್ದಾರೆ

-ಶಾಂತಮ್ಮ , ಮೈಸೂರಿನ ಗ್ರಾಮೀಣ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.