
ಬೆಂಗಳೂರು: ತಾಂತ್ರಿಕ ಶಿಕ್ಷಣ ಕ್ಷೇತ್ರವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪರಾಮರ್ಶೆ ನಡೆಸಿ, ಸುಧಾರಣೆಗಳನ್ನು ತರುವ ಕುರಿತು ಶಿಫಾರಸುಗಳನ್ನು ಮಾಡಲು ತಜ್ಞರ ಸಮಿತಿ ರಚಿಸಿರುವ ಸರ್ಕಾರ, ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ.
ಮುಂಬೈ ಐಐಟಿಯ ಮಾಜಿ ನಿರ್ದೇಶಕ ಡಾ.ಎಸ್.ಸಡಗೋಪನ್ ಸಮಿತಿಯ ಅಧ್ಯಕ್ಷರಾಗಿದ್ದು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿದ್ಯಾಶಂಕರ್, ಯುವಿಸಿಇ ನಿರ್ದೇಶಕ ಸುಭಾಶಿಷ್ ತ್ರಿಪಾಠಿ, ಪ್ರೊ.ಜಗದೀಶ್, ಪ್ರೊ.ಎಸ್.ಗೋಪಾಲಕೃಷ್ಣನ್, ಶ್ಯಾಂ ಎಸ್.ರಾವ್, ಪ್ರೊ.ವೈ.ನರಹರಿ, ಕೆಇಎ ಆಡಳಿತಾಧಿಕಾರಿ, ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಸಮಿತಿಯ ಸದಸ್ಯರಾಗಿದ್ದಾರೆ.
ಕಂಪ್ಯೂಟರ್ ಸೈನ್ಸ್ ಮತ್ತು ಇದಕ್ಕೆ ಪೂರಕವಾದ ಕೋರ್ಸ್‌ಗಳಲ್ಲಿ ಪ್ರವೇಶ ಸಂಖ್ಯೆ ಕುರಿತು ಪುನರ್ ಪರಿಶೀಲನೆ, ಈಗಿನ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳಿಗೆ ತಕ್ಕಂತೆ ಮೂಲ ಎಂಜಿನಿಯರಿಂಗ್ ಕೋರ್ಸ್‌ಗಳ ಪಠ್ಯಕ್ರಮ ಪರಿಷ್ಕರಣೆ, ಮೂಲ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಉತ್ತೇಜನಕಾರಿ ಕ್ರಮಗಳ ಬಗ್ಗೆ ಸಮಿತಿಯು ಅಧ್ಯಯನ ನಡೆಸಿ ವರದಿ ನೀಡಲಿದೆ.
ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಗಳನ್ನು ಪುನಶ್ಚೇತನಗೊಳಿಸಿ, ಆ ಕೋರ್ಸ್‌ಗಳತ್ತ ವಿದ್ಯಾರ್ಥಿಗಳನ್ನು ಆಕರ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿ, ಅಗತ್ಯವಾದ ಶಿಫಾರಸುಗಳನ್ನು ಮಾಡುವಂತೆ ಸಮಿತಿಗೆ ಸೂಚಿಸಲಾಗಿದೆ.
ಕೆಲವು ಕಾಲೇಜುಗಳಲ್ಲಿ ಮೂಲ ಎಂಜಿನಿಯರಿಂಗ್ ಕೋರ್ಸ್‌ಗಳು ಮುಚ್ಚುವ ಹಂತಕ್ಕೆ ಬಂದಿರುವುದು, ಕೆಲವು ವಿಭಾಗಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸೀಟುಗಳು ಉಳಿಯುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಎಂಜಿನಿಯರಿಂಗ್ ಪದವಿ ಪಡೆದವರಲ್ಲಿ ಶೇ 17ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆಗಳನ್ನು ತರಲು ಸರ್ಕಾರ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.