ADVERTISEMENT

ಬೋಟ್‌ನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷ

3 ಕಿ.ಮೀ. ಕ್ರಮಿಸುವಷ್ಟರಲ್ಲಿ ರೇಡಿಯೇಟರ್‌ನಲ್ಲಿ ಸಮಸ್ಯೆ ?

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 15:02 IST
Last Updated 18 ಜನವರಿ 2019, 15:02 IST
ನಾಪತ್ತೆಯಾಗಿರುವ ‘ಸುವರ್ಣ ತ್ರಿಭುಜ’ ಮೀನುಗಾರಿಕೆ ದೋಣಿ
ನಾಪತ್ತೆಯಾಗಿರುವ ‘ಸುವರ್ಣ ತ್ರಿಭುಜ’ ಮೀನುಗಾರಿಕೆ ದೋಣಿ   

ಉಡುಪಿ: ಡಿ.13ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್‌ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ವಿಚಾರ ಬಯಲಾಗಿದೆ.

ಬಂದರಿನಿಂದ ಹೊರಟ ಬೋಟ್‌ 3 ಕಿ.ಮೀ. ಕ್ರಮಿಸುವಷ್ಟರಲ್ಲಿ ರೇಡಿಯೇಟರ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ತಕ್ಷಣ ಚಾಲಕ ಬೋಟ್‌ ಅನ್ನು ಬಂದರಿನತ್ತ ತಿರುಗಿಸಿ, ದುರಸ್ತಿ ಮಾಡಿಸಿಕೊಂಡು ಮತ್ತೆ ಮೀನುಗಾರಿಕೆ ತೆರಳಿದ್ದ ಎನ್ನಲಾಗಿದೆ.

ಮಲ್ಪೆಯಿಂದ ಗುಂಪು ಮೀನುಗಾರಿಕೆಗೆ ತೆರಳಿದ್ದ ಇತರ ಬೋಟ್‌ಗಳನ್ನು ತಲುಪುವ ಉದ್ದೇಶದಿಂದ ಸುವರ್ಣ ತ್ರಿಭುಜ ಬೋಟ್‌ನ ಚಾಲಕ ವೇಗವಾಗಿ ಬೋಟ್‌ ಚಲಾಯಿಸಿದ್ದರಿಂದ ಕಾರ್ಬೆಟರ್‌ ಸ್ಫೋಟವಾಗಿ ದುರಂತ ಸಂಭವಿಸಿರುವ ಸಾದ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಹಿನ್ನೆಲೆಯಲ್ಲಿ ಸೋನಾರ್ ತಂತ್ರಜ್ಞಾನ ಬಳಸಿಕೊಂಡು 25ರಿಂದ 40 ನಾಟಿ ಮೈಲ್ ದೂರದ ಸಮುದ್ರದ ತಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಡಿ.15ರಂದು ಸಂಪರ್ಕ ಕಡಿದುಕೊಂಡ ಬಳಿಕ ಮಧ್ಯರಾತ್ರಿ 2ರಿಂದ ಬೆಳಿಗ್ಗೆ 7ರವರೆಗಿನ ಸಮಯಲ್ಲಿ ಏನಾಗಿರಬಹುದು ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಈ ಅವಧಿಯಲ್ಲಿ ಬೋಟ್‌ ಬೋಟ್ ಅಪಹರಣಕ್ಕೊಳಗಾಗಿದೆಯೇ ಅಥವಾ ಅವಘಡಕ್ಕೆ ತುತ್ತಾಗಿದೆಯೇ ಎಂಬ ಆಯಾಮಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೊಚ್ಚಿಯಿಂದ ಗುಜರಾತ್‌ವರೆಗೆ ಹುಡುಕಾಟ ನಡೆಸಲಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಬೋಟ್ ಅಪಹರಣಕ್ಕೆ ಒಳಗಾಗಿರುವ ಸಾಧ್ಯತೆ ತೀರಾ ಕಡಿಮೆ ಎಂಬ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಡಿ.15ರಂದು ಮುಂಬೈಯಿಂದ ಕಾರವಾರಕ್ಕೆ ತೆರಳುತ್ತಿದ್ದ ಕೊಚ್ಚಿನ್ ಹಡಗಿಗೆ ಬೋಟ್‌ ಡಿಕ್ಕಿ ಹೊಡೆದಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.