ADVERTISEMENT

‘ಟಿಕೆಟ್‌ ತಪ್ಪಿದ್ದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ’– ತೇಜಸ್ವಿನಿ ಅನಂತಕುಮಾರ್‌

ನೋಟಾ ಚಲಾಯಿಸುವಂತೆ ನಾನು ಪ್ರಚಾರ ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 20:15 IST
Last Updated 15 ಏಪ್ರಿಲ್ 2019, 20:15 IST
   

ಬೆಂಗಳೂರು: ‘ನನಗೆ ಯಾಕೆ ಟಿಕೆಟ್‌ ತಪ್ಪಿತು ಸೇರಿದಂತೆ ನನ್ನ ಎಲ್ಲ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪಕ್ಷದ ಹಿರಿಯರಲ್ಲಿ ನಾನು ಮತ್ತೆ ಕೇಳಲು ಹೋಗಿಲ್ಲ. ಅವರೂ ಹೇಳಿಲ್ಲ’‌ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಸ್ಪಷ್ಟಪಡಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಈಗ ಯುದ್ಧ ಕಾಲ (ಚುನಾವಣೆ). ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ’ ಎಂದರು.

‘ನೋಟಾ (ಯಾರಿಗೂ ಮತ ಹಾಕದಿರುವುದು) ಮತ ಚಲಾಯಿಸುವಂತೆ ನಾನು ಹೇಳಿದ್ದೇನೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಕರಪತ್ರಗಳು ಹರಿದಾಡುತ್ತಿವೆ. ಇದು ಸತ್ಯಕ್ಕೆ ದೂರವಾಗಿದೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಈಗಾಗಲೇ ಪೊಲೀಸರಿಗೆ ಮತ್ತು ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿ’ ಎಂದರು.

ADVERTISEMENT

‘ತಮ್ಮ ಕೊನೆಯುಸಿರಿನವರೆಗೆ ಪತಿ ಅನಂತಕುಮಾರ್‌ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಅದೇ ಪರಿವಾರದಿಂದ ಬಂದಿರುವ ನಾನು ಕೂಡಾ, ದೇಶ ಮೊದಲು, ಪಕ್ಷ ನಂತರ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷ ನನಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಹೀಗಾಗಿ, ಯಾರೂ ನೋಟಾ ಬಳಸುವ ಅಗತ್ಯ ಇಲ್ಲ. ಎಲ್ಲರೂ ಬಿಜೆಪಿಗೆ ಮತ ನೀಡಬೇಕು. ನಾನು ಈಗಾಗಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದೇನೆ. ಯಾರೊ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮತದಾರರನ್ನು ಗೊಂದಲಕ್ಕೆ ಸಿಲುಕಿಸುವ ಉದ್ದೇಶದಿಂದ ಕೆಲವರು ನನ್ನ ಹೆಸರು ಬಳಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಹೆಸರು ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದೇನೆ’ ಎಂದರು.

‘ಡಿಎನ್‌ಎ, ಜೀನ್‌ ನೋಡಿ ಟಿಕೆಟ್‌ ನೀಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ತೇಜಸ್ವಿನಿ, ‘ಅವರು ಏನು ಹೇಳಿದ್ದಾರೆ ಎಂಬ ಬಗ್ಗೆ ಅವರ ಜೊತೆ ಚರ್ಚಿಸುತ್ತೇನೆ. ಬಳಿಕ ಏನು ಹೇಳಬೇಕೊ ಅದನ್ನು ಹೇಳುತ್ತೇನೆ’ ಎಂದಷ್ಟೆ ಹೇಳಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಮಹಿಳಾ ದೌರ್ಜನ್ಯದ ಆರೋಪ ಕೇಳಿಬಂದಿರುವ ಬಗ್ಗೆ ಅವರು, ‘ಚುನಾವಣೆ ಸಂದರ್ಭದಲ್ಲಿ ಇಂತಹ ಆರೋಪ ಸಹಜ. ತನಿಖೆಯ ಬಳಿಕವಷ್ಟೆ ಸತ್ಯವೊ, ಸುಳ್ಳೊ ಎನ್ನುವುದು ಗೊತ್ತಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.