ADVERTISEMENT

ತಾಪಮಾನವೂ ಏರಿಕೆ... ಬರಗಾಲವೂ ಉಲ್ಬಣ: ಬರಿದಾದ ನದಿ – ತೊರೆಗಳು

ಆದಿತ್ಯ
Published 2 ಏಪ್ರಿಲ್ 2024, 0:00 IST
Last Updated 2 ಏಪ್ರಿಲ್ 2024, 0:00 IST
ಕೊಡಗಿನ ಕಾವೇರಿ ನದಿಯಲ್ಲಿ ಕಲ್ಲುಗಳ ದರ್ಶನವಾಗುತ್ತಿದೆ.
ಕೊಡಗಿನ ಕಾವೇರಿ ನದಿಯಲ್ಲಿ ಕಲ್ಲುಗಳ ದರ್ಶನವಾಗುತ್ತಿದೆ.   

ಬೆಂಗಳೂರು: ರಾಜ್ಯದಲ್ಲಿ ದಿನೆ ದಿನೇ ತಾಪಮಾನ ಏರಿಕೆ ಆಗುತ್ತಿದ್ದು, ಬರ ಪರಿಸ್ಥಿತಿಯೂ ಗಂಭೀರವಾಗುತ್ತಿದೆ. ಏಪ್ರಿಲ್‌ ಕಾಲಿಟ್ಟರೂ ಮಳೆ ಬರುವ ಮುನ್ಸೂಚನೆ ಕಾಣಿಸುತ್ತಿಲ್ಲ. ಕೆರೆ–ಕಟ್ಟೆಗಳು ಹಾಗೂ ನದಿ ತೊರೆಗಳು ಬರಿದಾಗಿ ನಿಂತಿವೆ.

ಫೆಬ್ರುವರಿ ವೇಳೆಯಲ್ಲಿ ರಾಜ್ಯದ ಹಲವು ಕೆರೆಗಳಲ್ಲಿ ಶೇ 50ರಷ್ಟು ನೀರು ಲಭ್ಯವಿತ್ತು. ಅವುಗಳಲ್ಲಿದ್ದ ನೀರು ಈಗ ಅರ್ಧದಷ್ಟು ಖಾಲಿಯಾಗಿದೆ. ಜನ–ಜಾನುವಾರುಗಳ ಸಂಕಷ್ಟ ಉಲ್ಬಣಿಸಿದೆ. 

ಕಳೆದ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ, ಹಲವು ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪಟ್ಟಿಗೆ ಸೇರಿಸಿತ್ತು. ಈಗ 25 ಜಿಲ್ಲೆಗಳ, 117 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಲ್ಲೀಗ ಟ್ಯಾಂಕರ್‌ ಹಾಗೂ ಬಾಡಿಗೆಗೆ ಕೊಳವೆಬಾವಿ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ತಿಂಗಳು ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ರಾಜ್ಯದಲ್ಲಿ 27,481 ಜನವಸತಿ ಪ್ರದೇಶಗಳಿದ್ದು, ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಹಲವು ವಾರ್ಡ್‌ ಹಾಗೂ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಗೋಚರಿಸಿತ್ತು. ಈಗ ಅವುಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ.

ಕುಡಿಯುವ ನೀರು ಪೂರೈಸಲು ವಿವಿಧ ಜಿಲ್ಲೆಗಳಲ್ಲಿ ಮಾರ್ಚ್‌ 25ರ ವೇಳೆಗೆ 1,655 ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಮಾರ್ಚ್‌ 31ರ ವೇಳೆಗೆ 1,839 ಕೊಳವೆಬಾವಿ ಬಾಡಿಗೆಗೆ ಪಡೆದುಕೊಳ್ಳಲಾಗಿದೆ. ನೀರು ಪೂರೈಸಲು ಬಾಡಿಗೆಗೆ ಪಡೆಯುತ್ತಿರುವ ಕೊಳವೆಬಾವಿಗಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಬಾಡಿಗೆಗೆ ಪಡೆದಿರುವ ಕೊಳವೆಬಾವಿಗಳಲ್ಲೂ ನೀರಿನ ಲಭ್ಯತೆ ಕಡಿಮೆಯಿದೆ ಎನ್ನುತ್ತಾರೆ ಅಧಿಕಾರಿಗಳು.

ಚಿತ್ರದುರ್ಗದ 59, ಬೆಂಗಳೂರು ನಗರದ 53 ಪ್ರದೇಶ, ರಾಮನಗರದ 26, ವಿಜಯಪುರ ಜಿಲ್ಲೆಯ 68, ಬೆಳಗಾವಿಯ 50 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅಲ್ಲಿಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಹಲವು ಗ್ರಾಮಗಳದ್ದು ಅದೇ ಕಥೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು, ರೈತರು 5,483 ಜಾನುವಾರುಗಳನ್ನು ಗೋಶಾಲೆಗಳಿಗೆ ತಂದು ಬಿಟ್ಟಿದ್ದಾರೆ.

ನಾಲ್ಕು ವರ್ಷ ಬಳಿಕ ಮಲೆನಾಡು ಪ್ರದೇಶದಲ್ಲಿ ಮೊದಲ ಬಾರಿಗೆ ಬೇಸಿಗೆ ಭೀಕರತೆ ‘ದರ್ಶನ’ವಾಗುತ್ತಿದೆ. ಚಿಕ್ಕಮಗಳೂರು, ಹಾಸನ ಭಾಗದಲ್ಲಿ ಕಾಫಿ, ತೆಂಗು, ಅಡಿಕೆ ಬೆಳೆಗೆ ನೀರಿಲ್ಲದೆ ತೋಟಗಳು ಒಣಗುತ್ತಿವೆ.

‘ತೋಟಕ್ಕೆ ನೀರು ಹಾಯಿಸಲು ನದಿಗಳಲ್ಲಿಯೇ ನೀರಿಲ್ಲ. ಅಂತರ್ಜಲ ಕಡಿಮೆಯಾಗಿ ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ’ ಎಂದು ಕೊಡಗಿನ ಹೊಸತೋಟದ ನಂಜಪ್ಪ ಹೇಳುತ್ತಾರೆ.

ನೀರಿನ ಸಮಸ್ಯೆಯ ತೀವ್ರತೆ ತಾಲ್ಲೂಕುಗಳ ಸಂಖ್ಯೆ;123

ಗ್ರಾಮ ಪಂಚಾಯಿತಿಗಳ ಸಂಖ್ಯೆ;683

ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳು;316

ಬಾಡಿಗೆಗೆ ಪಡೆದಿರುವ ಕೊಳವೆಬಾವಿಗಳು;1839

ನಾಲ್ಕು ಜಿಲ್ಲೆಗಳಲ್ಲಿ ‘ಬಿಸಿಗಾಳಿ’ಯ ಎಚ್ಚರಿಕೆ

ರಾಜ್ಯದ ಉತ್ತರ ಒಳನಾಡು ಪ್ರದೇಶದಲ್ಲಿ ಮಂಗಳವಾರ ಹಾಗೂ ಬುಧವಾರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ–ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಾಗಲಕೋಟೆ ಬೆಳಗಾವಿ ವಿಜಯಪುರ ಜಿಲ್ಲೆಗಳ ಕೆಲವು ಭಾಗದಲ್ಲಿ ಮಂಗಳವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್‌ 3ರಿಂದ 5ರ ತನಕ ಉತ್ತರ ಒಳನಾಡಿನ ಕಲಬುರಗಿ ಬಾಗಲಕೋಟೆ ರಾಯಚೂರು ಕೊಪ್ಪಳ ಜಿಲ್ಲೆಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ರಾಜ್ಯದಲ್ಲೇ ಸೋಮವಾರ ಗರಿಷ್ಠ ಉಷ್ಣಾಂಶ ಕಲಬುರಗಿ ಜಿಲ್ಲೆಯಲ್ಲಿ 41.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ತಿಳಿಸಿದೆ.

ನದಿಯಲ್ಲಿ ‘ಕಲ್ಲುಗಳ ದರ್ಶನ’

ಕಾವೇರಿ ತುಂಗಾ–ಭದ್ರಾ ನದಿಗಳು ಬತ್ತಿ ಹೋಗಿದ್ದು ತಳದಲ್ಲಿರುವ ‘ಕಲ್ಲುಗಳ ದರ್ಶನ’ವಾಗುತ್ತಿದೆ. ಕೊಡಗಿನಲ್ಲಿ ಕಾವೇರಿ ನದಿಯ ನೀರನ್ನು ತೋಟಕ್ಕೆ ನೀರು ಬಳಸದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕುಡಿಯಲು ಮಾತ್ರ ಬಳಸುವಂತೆ ಸೂಚಿಸಿದ್ದಾರೆ. ನದಿಗಳ ನೀರನ್ನೇ ಕುಡಿಯಲು ಬಳಸುತ್ತಿರುವ ನದಿ ಅಕ್ಕಪಕ್ಕದ ಪಟ್ಟಣ ಪ್ರದೇಶಗಳಲ್ಲೂ ದಿನ ಕಳೆದಂತೆ ಸಮಸ್ಯೆ ತೀವ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.