ADVERTISEMENT

ಮುಸ್ಲಿಮರ ಸಹಕಾರ: ಶಿವನ ದೇವಾಲಯ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 13:55 IST
Last Updated 27 ಜೂನ್ 2020, 13:55 IST
ಶಿರಸಿ ತಾಲ್ಲೂಕಿನ ಸೋದೆಯಲ್ಲಿ ಬೆಳಕಿಗೆ ಬಂದಿರುವ ಶಿವನ ಗುಡಿ
ಶಿರಸಿ ತಾಲ್ಲೂಕಿನ ಸೋದೆಯಲ್ಲಿ ಬೆಳಕಿಗೆ ಬಂದಿರುವ ಶಿವನ ಗುಡಿ   

ಶಿರಸಿ: ಸೋಂದಾ ಜಾಗೃತ ವೇದಿಕೆ ಹಾಗೂ ಸೋದೆಪೇಟೆಯ ಮುಸ್ಲಿಮರ ಶ್ರಮದ ಕಾಯಕದಿಂದ ತಾಲ್ಲೂಕಿನ ಸೋಂದಾದಲ್ಲಿ ಅಜ್ಞಾತವಾಗಿದ್ದ ಶಿವನ ಗುಡಿಯೊಂದು ಶನಿವಾರ ಬೆಳಕಿಗೆ ಬಂದಿದೆ.

ಸೋದೆ ಅರಸರು ಆಳ್ವಿಕೆ ನಡೆಸಿರುವ ಈ ಪ್ರದೇಶದಲ್ಲಿ ಹಲವಾರು ಶಾಸನ, ದೇವಾಲಯ, ಕೋಟೆ ಕೊತ್ತಲಗಳು ಇವೆ. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅಧ್ಯಯನಕ್ಕಾಗಿ ರಚನೆಯಾಗಿರುವ ಜಾಗೃತ ವೇದಿಕೆಯ ತಂಡವು, ಸೋದೆ ಸುತ್ತಮುತ್ತ ಇತಿಹಾಸದ ಕುರುಹುಗಳ ಹುಡುಕಾಟದಲ್ಲಿದ್ದಾಗ ಈ ಗುಡಿಯ ಕುರುಹು ಕಂಡುಬಂದಿದೆ.

‘ಸೋದೆಪೇಟೆಯಲ್ಲಿ ಮುಸ್ಲಿಂ ಕುಟುಂಬಗಳು ವಾಸಿಸುವ ಸ್ಥಳದಲ್ಲಿ ಈ ಗುಡಿ ಇತ್ತು. ಭಾಗಶಃ ಮಣ್ಣಿನಿಂದ ಮುಚ್ಚಿದ್ದ ಇದರಲ್ಲಿ ಗಿಡ–ಗಂಟಿ, ಪೊದೆಗಳು ಬೆಳೆದಿದ್ದವು. ಹಾವು, ವಿಷಜಂತು ಇರಬಹುದೆಂಬ ಭಯಕ್ಕೆ ಯಾರೂ ಆ ಕಡೆ ಹೋಗುತ್ತಿರಲಿಲ್ಲ. ಅಬ್ದುಲ್ ಸಲಾಂ ರಜಾಕ್ ಶೇಖ್, ಅಬ್ದುಲ್ ಮುತಲಿಬ್ ಅಬ್ದುಲ್ ಶೇಖ್, ಹುಸೇನ್ ಸಾಬ್ ಖಾಸೀಂ ಸಾಬ್, ಅಬ್ದುಲ್ ಗಫೂರ್ ಮೊಯ್ದಿನ್ ಸಾಬ್, ಮುನ್ನಾ ಸಾಬ್, ಅಬ್ದುಲ್ ಖುದ್ದುಸ್ ಅಬ್ದುಲ್ ಸಲಾಂ ಶೇಖ್ ಹಾಗೂ ಅಬ್ದುಲ್ ಗಫಾರ್ ಅಬ್ದುಲ್ ರಜಾಕ್ ಶೇಖ್, ಯುಸೂಫ್ ಖಾನ್ ಅಹ್ಮದ್ ಖಾನ್ ಅವರು ಗಿಡ–ಗಂಟಿ, ಮಣ್ಣನ್ನು ತೆರವುಗೊಳಿಸಿದ್ದರಿಂದ ಗುಡಿ ಇರುವುದು ಗೊತ್ತಾಯಿತು’ ಎಂದು ಜಾಗೃತ ವೇದಿಕೆ ಪ್ರಮುಖರು ತಿಳಿಸಿದ್ದಾರೆ.

ADVERTISEMENT

‘ಇದು ಸೋದೆಯ ಅರಸರ ಕಾಲಾವಧಿಯಲ್ಲಿ 17ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಾಣಗೊಂಡ ಕಲ್ಯಾಣ ಚಾಲುಕ್ಯ ಮತ್ತು ವಿಜಯನಗರ ಶೈಲಿಯ ಪುಟ್ಟ ಶಿವನ ಗುಡಿಯಾಗಿದೆ. ಇದರ ಗರ್ಭಗುಡಿಯಲ್ಲಿ ಪಾಣಿಪೀಠ ಮತ್ತು ನಂದಿಯ ವಿಗ್ರಹ ಕಂಡುಬಂದಿದೆ. ಇದರ ಕುರಿತು ಹೆಚ್ಚಿನ ಅಧ್ಯಯನ ಮುಂದುವರಿಸಲಾಗಿದೆ’ ಎಂದು ಇತಿಹಾಸಕಾರ ಲಕ್ಷ್ಮೀಶ ಸೋಂದಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.