ADVERTISEMENT

ವಾತಾವರಣದಲ್ಲಿ ತೇವಾಂಶದ ನಷ್ಟ, ಕೃಷಿಗೆ ಸಂಕಷ್ಟ!

ಮಳೆಗಾಲದಲ್ಲೂ 26– 30 ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 19:30 IST
Last Updated 10 ಸೆಪ್ಟೆಂಬರ್ 2018, 19:30 IST
   

ಬೆಂಗಳೂರು:ವಾತಾವರಣದಲ್ಲಿ ತೇವಾಂಶದ ಕೊರತೆ ಮತ್ತು ಚಳಿ ಮಾಯವಾಗಿರುವುದರಿಂದ ರಾಜ್ಯದ ಉತ್ತರ ಒಳನಾಡಿನ ಬಹುತೇಕ ಬೆಳೆಗಳು ಒಣಗುವ ಸ್ಥಿತಿಯಲ್ಲಿವೆ.

ತೇವಾಂಶದಿಂದ ಕೂಡಿದ ಚಳಿಯ ವಾತಾವರಣ ಹಲವು ಬೆಳೆಗಳಿಗೆ ಅದರಲ್ಲೂ ತೊಗರಿ, ಜೋಳ, ಕಡಲೆಗೆ ಅತ್ಯಗತ್ಯ. ಆದರೆ, ವಾತಾವರಣವೇ ಪ್ರತಿಕೂಲವಾಗಿರುವುದರಿಂದ ಬೆಳೆ ರೈತರ ಕೈಗೆ ಸಿಗುವುದು ಕಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಪ್ರಭುಲಿಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ಸೆಪ್ಟಂಬರ್‌ನಲ್ಲಿ ತೇವಾಂಶ ಇರುವುದರಿಂದ ರಾಜ್ಯದಲ್ಲಿ ಉಷ್ಣಾಂಶ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 24 ಡಿಗ್ರಿ ಸೆಲ್ಸಿಯಸ್‌ ಒಳಗಿರುತ್ತದೆ. ಆದರೆ ಈ ಬಾರಿ ಕನಿಷ್ಠ 26 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.

ADVERTISEMENT

ಈ ವಾರದಲ್ಲಿ ಒಂದೆರಡು ದಿನಗಳು ಮಳೆ ಆಗುವ ನಿರೀಕ್ಷೆ ಇದೆ. ಒಂದು ವೇಳೆ ಮಳೆ ಬಿದ್ದರೆ ವಾತಾವರಣದಲ್ಲಿ ತೇವಾಂಶ ಸಂಚಯವಾಗಿ ತಂಪಾಗುತ್ತದೆ. ಇಲ್ಲವಾದರೆ, ಉಷ್ಣಾಂಶದ ಏರಿಕೆ ಪ್ರವೃತ್ತಿ ಮುಂದುವರೆಯುತ್ತದೆ. ಮುಂದಿನ ಹಂತದಲ್ಲಿ ಹಿಂಗಾರು ಮಳೆ ಕೂಡಾ ಬಹು ಮುಖ್ಯ. ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹತೇಕ ಕೃಷಿಕರು ಈ ಮಳೆಯನ್ನೇ ನೆಚ್ಚಿಕೊಂಡಿದ್ದಾರೆ. ಈಗ ತೇವಾಂಶ ಇಲ್ಲದೇ ಇರುವುದರಿಂದ ರಾಜ್ಯದಲ್ಲಿ ಹಿಂಗಾರು ಮಳೆಯ ಸ್ಥಿತಿ ಏನಾಗಬಹುದು ಎಂಬುದನ್ನು ಈಗಲೇ ಊಹಿಸುವುದು ಕಷ್ಟ ಎಂಬುದು ಅವರ ಅಭಿಪ್ರಾಯ.

ಹಿಂದಿನ ವರ್ಷಗಳಲ್ಲಿ ಹಿಂಗಾರು ಮಳೆಗೆ ಮೊದಲೇ ವಾತಾವರಣದಲ್ಲಿ ತೇವಾಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿತ್ತು. ಇದರಿಂದ ಮಳೆಯೂ ಉತ್ತಮವಾಗಿರುತ್ತಿತ್ತು ಎಂದು ಪ್ರಭುಲಿಂಗಪ್ಪ ತಿಳಿಸಿದರು.

ಬೆಳೆಗಳು ಒಣಗುತ್ತಿವೆ: ಪ್ರತಿಕೂಲ ಹವಾಮಾನದಿಂದಾಗಿ ಉತ್ತರ ಒಳನಾಡಿನಲ್ಲಿ ಬೆಳೆಗಳು ಈಗಾಗಲೇ ಒಣಗಲಾರಂಭಿಸಿವೆ. ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕಟಾವಿಗೆ ಬರಬೇಕಾಗಿದ್ದ ತೊಗರಿಯ ಮೇಲೂ ಹವಾಮಾನ ಪರಿಣಾಮ ಬೀರಿದೆ. ಆರಂಭದಲ್ಲಿ ಮುಂಗಾರು ಉತ್ತಮವಾಗಿದ್ದರಿಂದ ರೈತರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಅಧಿಕ ಬಿತ್ತನೆ ಮಾಡಿದ್ದರು. ಆದರೆ, ಶುಷ್ಕ ಹವೆಯಿಂದ ರೈತರು ಕಂಗಾಲಾಗಿದ್ದಾರೆ. ಆಗಸ್ಟ್‌ ಕೊನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಬೆಳೆ ಸಂಪೂರ್ಣ ಒಣಗಿ ಹೋಗಿತ್ತು ಎಂದು ಅವರು ವಿವರಿಸಿದರು.

ಬೆಂಗಳೂರಿಗೆ ಬಾರದ ಮಳೆ

ಸೆಪ್ಟಂಬರ್‌ನಲ್ಲಿ ಈ ಬಾರಿ ವಾಡಿಕೆಗಿಂತ ಉತ್ತಮ ಮಳೆ ಆಗಬಹುದು ಎಂಬುದಾಗಿ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದರು. ಆದರೆ, 10 ದಿನವಾದರೂ ಬೆಂಗಳೂರಿಗೆ ಬರಬೇಕಿದ್ದ ಮಳೆ ಬಂದಿಲ್ಲ. ಇದಕ್ಕೂ ತೇವಾಂಶ ಕೊರತೆಯೇ ಕಾರಣ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.