ADVERTISEMENT

ಎಲ್ಲ ವಾರ್ಡ್‌ಗಳಲ್ಲೂ ಟೆಂಡರ್‌ಗೆ ಸಿದ್ಧತೆ

ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 18:07 IST
Last Updated 4 ಫೆಬ್ರುವರಿ 2021, 18:07 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂ ಘನ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಪ್ರಕ್ರಿಯೆ ಮೂಲಕವೇ ಗುತ್ತಿಗೆದಾರರನ್ನು ನಿಗದಿಪಡಿಸಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ ಸಚಿವರು, ‘80 ವಾರ್ಡ್‌ಗಳಲ್ಲಿ ಟೆಂಡರ್‌ ಮೂಲಕ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ. ಉಳಿದ ಎಲ್ಲ ವಾರ್ಡ್‌ಗಳಲ್ಲೂ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ’ ಎಂದರು.

‘ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆಯಲ್ಲಿ ಮಾಫಿಯಾ ಹಿಡಿತವಿದೆ. ಟೆಂಡರ್‌ ನಡೆಸಲು ಅಡ್ಡಿಪಡಿಸುವ ಪಡೆಯೇ ಇದೆ. ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಅವರಿಗೆ ಕೈಗವಸು ಮಾತ್ರ ನೀಡಲಾಗಿದೆ. ಗಮ್ ಬೂಟ್‌ ನೀಡಿಲ್ಲ. ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಮತ್ತು ಸೌಲಭ್ಯ ಒದಗಿಸುವ ಕುರಿತು ಸೂಕ್ತ ಕ್ರಮ ಜರುಗಿಸಬೇಕು. ರಸ್ತೆ ಬದಿಯಲ್ಲಿ ಘನ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹರಿಪ್ರಸಾದ್ ಆಗ್ರಹಿಸಿದರು.

ADVERTISEMENT

ಪೌರ ಕಾರ್ಮಿಕರಿಗೆ ಗಮ್‌ ಬೂಟ್‌ಗಳನ್ನು ಒದಗಿಸುವ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು. ರಸ್ತೆ ಬದಿ ಘನ ತ್ಯಾಜ್ಯ ಸುರಿಯುವ ವಾಣಿಜ್ಯ ಸಂಸ್ಥೆಗಳ ಉದ್ದಿಮೆ ಪರವಾನಗಿ ರದ್ದು ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಸಂಪರ್ಕ ರಸ್ತೆ ನಿರ್ಮಾಣದ ಭರವಸೆ: ಕಾಂಗ್ರೆಸ್‌ನ ಕೆ. ಪ್ರಕಾಶ್ ರಾಠೋಡ್‌ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರ ನೀಡಿದ ಗೃಹ ಸಚಿವರು, ‘ವಲಗೆರೆಹಳ್ಳಿ ಮತ್ತು ಕಣಿಮಿಣಿಕೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿರುವ ವಸತಿ ಸಮುಚ್ಚಯಗಳಿಗೆ ರಸ್ತೆ ಸಂಪರ್ಕ ಸುಧಾರಣೆಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

115 ಮಂದಿ ಹೊರ ರಾಜ್ಯದವರು: ಜೆಡಿಎಸ್‌ನ ಕಾಂತರಾಜ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ 1,112 ಉದ್ಯೋಗಿಗಳು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ 997 ಮಂದಿ ಕರ್ನಾಟಕದವರು. 115 ಉದ್ಯೋಗಿಗಳು ಹೊರ ರಾಜ್ಯದವರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.