ADVERTISEMENT

ಪೆರಿಫೆರಲ್‌ ರಸ್ತೆ ಕಾಮಗಾರಿಗೆ ತಿಂಗಳಲ್ಲಿ ಟೆಂಡರ್‌: ಸಿ.ಎಂ ಕುಮಾರಸ್ವಾಮಿ

* ಬೆಂಗಳೂರು ಅಭಿವೃದ್ಧಿಗೆ ವಿಶೇಷ ಒತ್ತು – * ಐದು ತಿಂಗಳ ಆಡಳಿತದ ಆತ್ಮಾವಲೋಕನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 17:16 IST
Last Updated 23 ಅಕ್ಟೋಬರ್ 2018, 17:16 IST

ಬೆಂಗಳೂರು: ನಗರದಲ್ಲಿ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ₹ 2,000 ಕೋಟಿ ನಿಗದಿ ಮಾಡಿದ್ದು, ಇನ್ನು ಒಂದು ತಿಂಗಳಲ್ಲಿ ಕಾಮಗಾರಿಗೆ ಟೆಂಡರ್‌ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ ಆಯೋಜಿಸಿದ್ದ ಸರ್ಕಾರದ ಐದು ತಿಂಗಳ ಸಾಧನೆಯ ಕುರಿತ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, 60 ಮೀಟರ್‌ ಅಗಲದ ವಿಸ್ತೀರ್ಣವುಳ್ಳ 65.35 ಕಿ.ಮೀ ಉದ್ದದ ರಸ್ತೆಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಮುಂದಿನ ವರ್ಷದ ಬಜೆಟ್‌ನಲ್ಲಿ ₹ 4,500 ಕೋಟಿ ನೀಡಲಾಗುವುದು.ಈ ಯೋಜನೆಗೆ ಹೈಬ್ರಿಡ್ ಆನ್ಯುಟಿ ಮಾದರಿಯಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡಲಾಗುವುದು. 12 ವರ್ಷಗಳ ಹಿಂದೆ ಈ ಯೋಜನೆಯನ್ನು ರೂಪಿಸಲಾಗಿತ್ತು ಎಂದು ಕುಮಾರಸ್ವಾಮಿ ವಿವರಿಸಿದರು.

ADVERTISEMENT

ಎಲಿವೇಟೆಡ್‌ ಕಾರಿಡಾರ್‌: ನಗರದ ಸಂಚಾರ ದಟ್ಟಣೆ ಕಡಿಮ ಮಾಡಲು ₹ 14,540 ಕೋಟಿ ಅಂದಾಜು ವೆಚ್ಚದಲ್ಲಿ 102 ಕಿ.ಮೀ ಉದ್ದದ ಆರು ಎಲಿವೇಟೆಡ್‌ ಕಾರಿಡಾರ್‌ಗಳನ್ನು ಐದು ಹಂತಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಪರಿಸರದ ಮೇಲೆ ಆಗಬಹುದಾದ ಹಾನಿಯ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಕಾಮಗಾರಿ ಆರಂಭಿಸುವುದಕ್ಕೆ ಮೊದಲು ಸಾರ್ವಜನಿಕರ ಅಭಿಪ್ರಾಯ ಪಡೆದು ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿಯವರು ಅಧಿಕಾರಿಗಳ ಜತೆ ನಿಯಮಿತವಾಗಿ ಸಭೆಗಳನ್ನು ನಡೆಸುವುದಲ್ಲದೆ, ಖುದ್ದಾಗಿ ಸ್ಥಳ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.