ಶಿಕ್ಷಕ
– ಗೆಟ್ಟಿ ಚಿತ್ರ
ಬೆಂಗಳೂರು: ‘ಬಡ್ತಿ ಹಾಗೂ ಸೇವೆ ಮುಂದುವರಿಕೆಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
‘ಟಿಇಟಿ ಪರೀಕ್ಷೆಯನ್ನು ಸೇವಾನಿರತ ಶಿಕ್ಷಕರಿಗೆ ಪೂರ್ವಾನ್ವಯಗೊಳಿಸಬಾರದು ಎನ್ನುವ ತೀರ್ಮಾನವನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಖಬೇಕು’ ಎಂದು ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಚೇತನ್ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕವು ಈಗಾಗಲೇ ಶಿಕ್ಷಕರ ತೀವ್ರ ಕೊರತೆಯನ್ನು ಅನುಸರಿಸುತ್ತಿದೆ. ಸುಪ್ರೀಂಕೋರ್ಟ್ ನೀಡಿರುವ ಸೂಚನೆ ಪಾಲಿಸಿದರೆ 1.68 ಲಕ್ಷ ಶಿಕ್ಷಕರ ಮೇಲೆ ಅದು ಪರಿಣಾಮ ಬೀರಲಿದೆ. ಸಮಾಜ, ಶಿಕ್ಷಕರ ಕುಟುಂಬಗಳು ಮತ್ತು ಶಿಕ್ಷಕ ಸಮುದಾಯದ ವಿಶಾಲ ಹಿತಾಸಕ್ತಿಯ ದೃಷ್ಟಿಯಿಂದ ಕೋರ್ಟ್ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮಾನದಂಡಗಳು 2011ರಿಂದ ತೀವ್ರ ಚರ್ಚೆಗೆ
ಒಳಗಾಗುತ್ತಿವೆ. ತರಬೇತಿ ಪಡೆದ ಮತ್ತು ಶಿಕ್ಷಕರಾಗಲು ಸೇವಾ ಪೂರ್ವ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಶಿಕ್ಷಕರಿಗೆ ಅರ್ಹತಾ ಪರೀಕ್ಷೆಯನ್ನು ವಿಧಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸೇವಾ ಪೂರ್ವ ತರಬೇತಿಯನ್ನು ಪೂರ್ಣಗೊಳಿಸುವ ಬದಲು, ಶಿಕ್ಷಕರ ಆಯ್ಕೆಗೆ ಮೊದಲೇ ಟಿಇಟಿಯನ್ನು ಕಡ್ಡಾಯಗೊಳಿಸುವುದು ಸೂಕ್ತ. ಕರ್ನಾಟಕದಲ್ಲಿ 2014ರ ರಾಜ್ಯ ಸರ್ಕಾರ ನಿಗದಿಗೊಳಿಸಿರುವ ಸಿಇಟಿ ಉತ್ತೀರ್ಣರಾಗಿ ಶಿಕ್ಷಕರಾಗಿ ನೇಮಕಗೊಳ್ಳುತ್ತಿದ್ದಾರೆ ಎಂಬುದನ್ನುಕೋರ್ಟ್ ಗಮನಕ್ಕೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವೃತ್ತಿನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಮಾಡಿದರೆ ಹಲವು ವರ್ಷಗಳಿಂದ ವೃತ್ತಿಯಲ್ಲಿರುವ ಶಿಕ್ಷಕರ ಹಿತಾಸಕ್ತಿಗಳಿಗೆ ವಿರುದ್ಧವಾಗಲಿದೆ. ಅದನ್ನು ಜಾರಿ ಮಾಡಿದರೆ, ಇಡೀ ಶಿಕ್ಷಣ ವ್ಯವಸ್ಥೆಯು ಕುಸಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.