ADVERTISEMENT

ಪಠ್ಯ ಪರಿಷ್ಕರಣೆ ವಿವಾದ ಗೊಂದಲವಿಲ್ಲದೇ ಇತ್ಯರ್ಥ: ಕೋಟ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 19:26 IST
Last Updated 28 ಜೂನ್ 2022, 19:26 IST
   

ಮಂಗಳೂರು: ‘ಪಠ್ಯಪುಸ್ತಕ ಟೀಕೆ ಟಿಪ್ಪಣಿಗಳಿಗೆ ಸರ್ಕಾರ ಉತ್ತರ ಕೊಟ್ಟಿದೆ. ಎಲ್ಲರ ಹೇಳಿಕೆಗಳನ್ನು ಗಮನಿಸಿದ್ದೇವೆ. ಎಲ್ಲರ ಅಭಿಪ್ರಾಯ ಪಡೆದು ನ್ಯಾಯಯುತ ತೀರ್ಮಾನ ತೆಗೆದುಕೊಳ್ಳುತ್ತೇವೆ. ಪಠ್ಯಗಳ ಮುದ್ರಣ ದೋಷ ತಿದ್ದುಪಡಿ ಮಾಡಲು ಹಾಗೂ ಪ್ರಮಾದಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದ್ದಾರೆ. ಯಾವುದೇ ಗೊಂದಲ ಇಲ್ಲದೇ ಸಮಸ್ಯೆ ಇತ್ಯರ್ಥವಾಗಲಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಾರಾಯಣ ಗುರುಗಳ ವಿಚಾರವನ್ನು ಪಠ್ಯದಿಂದ ಕೈಬಿಟ್ಟ ವಿವಾದ ಇತ್ಯರ್ಥಕ್ಕೆ ಬಿಲ್ಲವ ಸಮಾಜದವರೇ ಆದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್‌ ಕುಮಾರ್‌ ಸ್ಪಂದಿಸಿಲ್ಲ ಎಂಬ ಬಿಲ್ಲವ ಸಂಘದವರ ಆರೋಪಕ್ಕೆ ಪ್ರತಿಕ್ರಿಯಿಸಿದ ಕೋಟ, ‘ನಾರಾಯಣಗುರುಗಳ ಕುರಿತು ಮೊದಲು ಇದ್ದ ಪಾಠವನ್ನು ಕೈಬಿಟ್ಟ ಬಗ್ಗೆ ಶಿಕ್ಷಣ ಇಲಾಖೆ ಗಮನಕ್ಕೆ ತಂದಿದ್ದೇವೆ. ತಪ್ಪಾಗಿದ್ದರೆ ಸರಿಪಡಿಸುತ್ತೇವೆ. ಇಲ್ಲಿ ಪ್ರತಿಷ್ಠೆ ಇಲ್ಲ’ ಎಂದರು.

ಇಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾರಾಯಣ ಗುರುಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಏಳಿಗೆಗೆ ಶ್ರಮಿಸಿದವರು. ಅವರ ಹೆಸರಿನಲ್ಲಿ ನಾಲ್ಕು ವಸತಿ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಂಡಿದ್ದೇವೆ. ಈ ಶಾಲೆಗಳಿಂದ ಎಲ್ಲ ವರ್ಗಗಳ ಬಡಮಕ್ಕಳಿಗೂ ಅನುಕೂಲವಾಗಲಿದೆ. ಈ ಶಾಲೆಗಳಲ್ಲಿ ವಿಶೇಷ ಧ್ಯಾನ ಮಂದಿರನ್ನೂ ನಿರ್ಮಿಸಲಿದ್ದೇವೆ’ ಎಂದರು.

ADVERTISEMENT

‘ಲೋಪವನ್ನೇ ಹುಡುಕಿ ಸರ್ಕಾರವನ್ನು ವಿನಾಕಾರಣ ಟೀಕಿಸುವುದು ಆರೋಗ್ಯಕರವಲ್ಲ. ನಿಗಮಗಳು ಇಲ್ಲದ ಜಾತಿಗಳ ಅಭಿವೃದ್ಧಿಗಾಗಿ ಸರ್ಕಾರ ₹ 400 ಕೋಟಿ ತೆಗೆದಿಟ್ಟಿದೆ. ಈಡಿಗ, ಬಿಲ್ಲವ, ನಾಮಧಾರಿ ಸಮುದಾಯಗಳಿಗೆ ವಿಶೇಷ ಕಾರ್ಯಕ್ರಮ ಘೋಷಣೆ ಮಾಡಲಿದೆ’ ಎಂದರು.

‘ಅಲ್ಪಸಂಖ್ಯಾತರ ಹಕ್ಕುಗಳ ಕಡೆಗಣನೆ ಆಗುತ್ತಿದೆ’ ಎಂದು ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಅವರು ಟೀಕೆ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಕೋಟ, ‘ಅವರ ಜೊತೆ ಮಾತನಾಡಿ, ಅವರ ಭಾವನೆ ಏನು ಎಂದು ಅರಿತು ಪ್ರತಿಕ್ರಿಯಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.