ADVERTISEMENT

ವಿಶೇಷ ವರದಿ– 2030 ರೊಳಗೆ ಕರ್ನಾಟಕದಲ್ಲಿ ವೃದ್ಧರೇ ಹೆಚ್ಚು, ಯುವಶಕ್ತಿಗೆ ಕುತ್ತು!

ರಾಜ್ಯದಲ್ಲಿ ಫಲವಂತಿಕೆ ದರ ತೀವ್ರ ಕುಸಿತ* ಜನನಕ್ಕಿಂತ ಮರಣವೇ ಹೆಚ್ಚು

ಪ್ರವೀಣ ಕುಮಾರ್ ಪಿ.ವಿ.
Published 6 ಮಾರ್ಚ್ 2022, 22:15 IST
Last Updated 6 ಮಾರ್ಚ್ 2022, 22:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕದಲ್ಲಿನ ಒಟ್ಟು ಫಲವಂತಿಕೆ ದರವು (ಟಿಎಫ್ಆರ್‌) ದೇಶದ ಫಲವಂತಿಕೆ ದರಕ್ಕಿಂತ ವೇಗ
ವಾಗಿ ಕುಸಿತ ಕಾಣುತ್ತಿದ್ದು, ಇದೇ ರೀತಿ ಮುಂದುವರಿದರೆ 2030ರ ವೇಳೆಗೆಜನನ ಪ್ರಮಾಣಕ್ಕಿಂತ ಮರಣ ಪ್ರಮಾಣವೇ ಹೆಚ್ಚಾಗಲಿದೆ. ಇದರಿಂದ ಒಟ್ಟಾರೆ ಜನಸಂಖ್ಯೆಯಲ್ಲಿ ವೃದ್ಧರ ಪ್ರಮಾಣ ಶೇ 15ಕ್ಕೆ ಹೆಚ್ಚಲಿದ್ದು, ದುಡಿಯುವ ಕೈಗಳ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ.

2021–22ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯು ಈ ಸಮಸ್ಯೆಯನ್ನು ವಿಶ್ಲೇಷಿಸಿದೆ.

ಇತ್ತೀಚಿನ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌–5) ಅಂಕಿ ಅಂಶಗಳೂ ರಾಜ್ಯದ ಜನಸಂಖ್ಯೆ ಗುಣಲಕ್ಷಣಗಳು ಸಾಕಷ್ಟು ಬದಲಾಗುತ್ತಿರುವುದನ್ನು ಹೇಳುತ್ತಿವೆ. ಸಾಮಾಜಿಕ– ಆರ್ಥಿಕ ಬೆಳವಣಿಗೆಯ ವಿಶ್ಲೇಷಣೆ ಮಾಡುವಾಗ ಇದನ್ನು ಪರಿಗಣಿಸಬೇಕಾಗುತ್ತದೆ. ಈ ಬೆಳವಣಿಗೆಯಿಂದ ಉಂಟಾಗಲಿರುವ ಸಮಸ್ಯೆ ನಿಭಾಯಿಸಲು ಉನ್ನತ ಕೌಶಲಯುತ ದುಡಿಯುವ ವರ್ಗವನ್ನು ಸೃಷ್ಟಿಸುವ ಕಾರ್ಯ ತುರ್ತಾಗಿ ಆಗಬೇಕು ಎಂದು ಸಮೀಕ್ಷೆಯಲ್ಲಿ ಸಲಹೆ ನೀಡಲಾಗಿದೆ.

ADVERTISEMENT

ಯಾವುದೇ ಅಭಿವೃದ್ಧಿಶೀಲ ಆರ್ಥಿಕ ವ್ಯವಸ್ಥೆಯಲ್ಲಿ ಟಿಎಫ್‌ಆರ್ ಶೇ 2.3ರಷ್ಟು ಹಾಗೂ ಅಭಿವೃದ್ಧಿ ಹೊಂದಿರುವ ವ್ಯವಸ್ಥೆಯಲ್ಲಿ ಶೇ 2.1ರಷ್ಟು ಇರಬೇಕು. ಆದರೆ, ಜನಸಂಖ್ಯಾ ಬೆಳವಣಿಗೆ ದರ ಈಗಾಗಲೇ ತುತ್ತ ತುದಿ ತಲುಪಿ ಆಗಿದೆ. ಇದು ಮುಂದಿನ ದಶಕದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿ, ವೃದ್ಧರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುವುದಕ್ಕೆ ಕಾರಣವಾಗಲಿದೆ.

ರಾಜ್ಯದಲ್ಲಿ 18ರಿಂದ 23 ವರ್ಷದೊಳಗಿನವರ ಸಂಖ್ಯೆ ಪ್ರತಿ ವರ್ಷವೂ ಶೇ –1ರಷ್ಟು ಕ್ಷೀಣಿಸುತ್ತಿದೆ. 2013ರಲ್ಲಿ ಈ ವಯೋಮಾನದವರ ಸಂಖ್ಯೆ 73.3 ಲಕ್ಷ ಇದ್ದುದು 2020ರಲ್ಲಿ 68.4 ಲಕ್ಷಕ್ಕೆ ಕುಸಿದಿದೆ. ಆದರೆ, ಈ ಅವಧಿಯಲ್ಲಿ ದೇಶದಲ್ಲಿ ಈ ವಯೋಮಾನದವರ ಸಂಖ್ಯೆ ಶೇ 0.2ರಷ್ಟು ಹೆಚ್ಚಳ ಕಂಡಿದೆ ಎಂಬುದು ಗಮನಾರ್ಹ.

ರಾಜ್ಯದ ಟಿಎಫ್‌ಆರ್‌ ದೇಶದ ದರಕ್ಕಿಂತಲೂ ವೇಗವಾಗಿ ಕುಸಿತ ಕಾಣುತ್ತಿದೆ. 1992–93ರಲ್ಲಿ ದೇಶದ ಟಿಎಫ್‌ಆರ್‌ ಶೇ 3.4 ಇದ್ದಾಗ, ರಾಜ್ಯದ ದರವು ಶೇ 2.85ರಷ್ಟಿತ್ತು. 2019–20ರಲ್ಲಿರಾಜ್ಯದ ಟಿಎಫ್‌ಆರ್‌ ಶೇ 1.7ಕ್ಕೆ ಇಳಿದಿದೆ. ಅಂದರೆ ಈ ಕುಸಿತ ಈಗಲೂ ನಿಂತಿಲ್ಲ. ನಾಗರಿಕ ನೋಂದಣಿ ದಾಖಲಾತಿಯ ಅಂಕಿ ಅಂಶಗಳೂ ಇದನ್ನು ಪುಷ್ಟೀಕರಿಸುತ್ತಿವೆ. ಇದು 2030ರ ವೇಳೆಗೆ ಶೇ 1.5ಕ್ಕೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಮರಣ ಪ್ರಮಾಣ ಏರಿಕೆ ಕಾಣುತ್ತಿದೆ. ಜನನ ಪ್ರಮಾಣದ ಕುಸಿತ ಹಾಗೂ ಮರಣ ದರ ಹೆಚ್ಚಳ ಇದೇ ರೀತಿ ಮುಂದುವರಿದರೆ 2030ರ ವೇಳೆಗೆ ರಾಜ್ಯದಲ್ಲಿ ವರ್ಷವೊಂದಕ್ಕೆ 10.2 ಲಕ್ಷ ಶಿಶುಗಳು ಜನಿಸಿದರೆ, ವಾರ್ಷಿಕ ಸಾವಿನ ಪ್ರಮಾಣ 12 ಲಕ್ಷದಷ್ಟು ಇರಲಿದೆ ಎಂದು
ವಿಶ್ಲೇಷಿಸಲಾಗಿದೆ.

ಟಿಎಫ್‌ಆರ್‌ ಕುಸಿತದಿಂದ ದುಡಿಯುವ ಕೈಗಳ ಸಂಖ್ಯೆಯೂ ಕಡಿಮೆ ಆಗಲಿದೆ. ಇಂತಹ ಪರಿಸ್ಥಿತಿ ನಿಭಾಯಿಸುವುದಕ್ಕೆ ಸಾಮಾಜಿಕ ಭದ್ರತೆ ಹೆಚ್ಚಿಸುವ ಕಾರ್ಯಕ್ರಮಗಳ ಅಗತ್ಯವಿದೆ. ಕೌಶಲಯುತ ದುಡಿಯುವ ವರ್ಗವನ್ನು ರೂಪಿಸುವುದಕ್ಕೂ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಆರ್ಥಿಕ ಸಮೀಕ್ಷೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.