ADVERTISEMENT

ಎಪಿಎಂಸಿ ಮುಚ್ಚೋದು ಇನ್ನು ಅನಿವಾರ್ಯ: ಬಸವರಾಜ ಯಕಲಾಸಪುರ

ಪ್ರಜಾವಾಣಿ ವಿಶೇಷ
Published 21 ಮೇ 2020, 20:00 IST
Last Updated 21 ಮೇ 2020, 20:00 IST
ಬಸವರಾಜ ಯಕಲಾಸಪುರ
ಬಸವರಾಜ ಯಕಲಾಸಪುರ   

ರೈತರ ಹೋರಾಟದ ಫಲವಾಗಿ ರೂಪುಗೊಂಡ ಸಂಸ್ಥೆ ಎಪಿಎಂಸಿ. ಇಲ್ಲಿ ರೈತರು ಹಾಗೂ ವ್ಯಾಪಾರಿಗಳ ನಡುವೆ ಮಧುರ ಬಾಂಧವ್ಯ ಇದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಈ ನಂಟನ್ನು ನಾಶಮಾಡಲು ರಾಜ್ಯ ಸರ್ಕಾರ ಹೊರಟಿದೆ. ಕಾಯ್ದೆ ತಿದ್ದುಪಡಿಯಿಂದ ಸರ್ಕಾರಕ್ಕೇ ಲುಕ್ಸಾನು ಆಗಲಿದೆ ಎಂಬುದು ಹುಬ್ಬಳ್ಳಿಯ ಎಪಿಎಂಸಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ಅವರ ಅಭಿಮತ.

ಕಾಯ್ದೆ ತಿದ್ದುಪಡಿ ಕುರಿತು ‘ಪ್ರಜಾವಾಣಿ’ ಯೊಂದಿಗೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ

***

ADVERTISEMENT

*ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಲಿದೆ ಎಂಬ ವಾದ ಇದೆಯಲ್ಲ?

ಎಪಿಎಂಸಿಗಳ ಸುಧಾರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ 2017ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ಈಗ ಇನ್ನೊಂದು ತಿದ್ದುಪಡಿ ತರಲಾಗಿದೆ. ಇದರ ಬದಲು ಎಪಿಎಂಸಿಯನ್ನೇ ಇನ್ನಷ್ಟು ಬಲಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಎಪಿಎಂಸಿಗಳ ಗಡಿಯನ್ನು ಬಲ‍ಪಡಿಸುವ ಕೆಲಸಕ್ಕೆ ಮುಂದಾಗಬೇಕಿತ್ತು. ನಮ್ಮಲ್ಲಿ ಮಾದರಿ ವ್ಯವಸ್ಥೆ ಇದೆ. ನಮ್ಮ ‘ಏಕೀಕೃತ ಮಾರಾಟ ವ್ಯವಸ್ಥೆ’ಯನ್ನೇ ಕೇಂದ್ರ ಅನುಸರಿಸಿದೆ. ‘ಇ–ನ್ಯಾಮ್‌’ ಪದ್ಧತಿಯನ್ನು 16 ರಾಜ್ಯಗಳು ಅನುಷ್ಠಾನಗೊಳಿಸಿವೆ. ಆದರೆ, ಸರ್ಕಾರ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ಸುಧಾರಣೆ ಎಂಬುದು ಕನಸಿನ ಗಂಟು.

ಎಪಿಎಂಸಿಯಲ್ಲಿ ಪಾರದರ್ಶಕವಾಗಿ ವ್ಯವಹಾರ ನಡೆಯುತ್ತಿದೆ. ಆನ್‌ಲೈನ್‌ ಟೆಂಡರ್‌ ವ್ಯವಸ್ಥೆ ಇರುವುದರಿಂದ ರೈತರಿಗೆ ಅನುಕೂಲ ವಾಗಿದೆ. ಉತ್ತಮ ಬೆಲೆ ಇದ್ದರೆ ಮಾತ್ರ ಅವರು ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಅವರೇನೂ ದಡ್ಡರಲ್ಲ. ಎಪಿಎಂಸಿಯಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಮುಂದಿನ ದಿನಗಳಲ್ಲಿ ಆ ಆದಾಯ ಕೈ ತಪ್ಪಲಿದೆ.

*ಬಿಳಿ ಚೀಟಿ, ರಿಂಗ್‌ನಂತಹ ಕೆಟ್ಟ ಪದ್ಧತಿಗಳ ಮೂಲಕ ಎಪಿಎಂಸಿಗಳಲ್ಲೂ ರೈತರಿಗೆ ವಂಚನೆ ಮಾಡಲಾಗುತ್ತಿದೆಯಲ್ಲ?

ರಿಂಗ್‌ ಪದ್ಧತಿ ಇರುವುದು ಕೊಬ್ಬರಿ ಮಾರುಕಟ್ಟೆಯಲ್ಲಿ ಮಾತ್ರ. ಎಪಿಎಂಸಿಗಳಲ್ಲಿ ಆನ್‌ಲೈನ್‌ ಮೂಲಕವೇ ವ್ಯವಹಾರ ನಡೆಯುತ್ತಿರುವುದರಿಂದ ಅಂತಹ ಪದ್ಧತಿಗಳಿಗೆ ಅವಕಾಶ ಇಲ್ಲ. ನಮ್ಮ ಹಾಗೂ ರೈತರ ನಡುವಿನ ನಂಬಿಕೆ ಚೌಕಟ್ಟಿನ ಆಧಾರದಲ್ಲಿ ಇಲ್ಲಿ ವ್ಯವಹಾರ ನಡೆಯುತ್ತಿದೆ. ದಶಕಗಳ ಬಾಂಧವ್ಯ ಇದೆ. ಶುಭ ಸಮಾರಂಭ ಹಾಗೂ ಕಷ್ಟ ಕಾಲದಲ್ಲಿ ನಾವು ಅವರಿಗೆ ನೆರವಾಗುತ್ತೇವೆ. ಒಂದು ರೀತಿಯ ಕೊಡುಕೊಳ್ಳುವಿಕೆ ವ್ಯವಸ್ಥೆ ಇದೆ.

ಕಮಿಷನ್‌ ಏಜೆಂಟರನ್ನು ಕಳ್ಳರು ಎಂದು ಕೆಲವರು ಬಿಂಬಿಸುತ್ತಿದ್ದಾರೆ. ನಾವು ಏನು ಕಳ್ಳತನ ಮಾಡಿದ್ದೇವೆ ಎಂಬುದನ್ನು ಸಾಬೀತುಪಡಿಸಲಿ. ನಾವು ಶೇ 2ರಷ್ಟು ಕಮಿಷನ್‌ ಪಡೆಯುವುದು ನಿಜ. ನಾವು ಕಾರಕೂನರ ಪಗಾರ ನೀಡಬೇಕು. ತೆರಿಗೆ ಕಟ್ಟಬೇಕು. ಅಂಗಡಿಯ ಬಾಡಿಗೆ ನೀಡಬೇಕು. ಇವೆಲ್ಲ ಕೊಟ್ಟ ಮೇಲೆ ಸಿಗುವ ಲಾಭ ಕಡಿಮೆ.

*ತಿದ್ದುಪಡಿ ಕಾಯ್ದೆಯಿಂದ ವರ್ತಕರ ಮೇಲಾಗುವ ಪರಿಣಾಮವೇನು?

ಬಹುರಾಷ್ಟ್ರೀಯ ಕಂಪನಿಗಳು ಬಂದಮೇಲೆ ಎ‍ಪಿಎಂಸಿಗೆ ಬಾಗಿಲು ಹಾಕುವುದು ಅನಿವಾರ್ಯ. ಈಗ ಎಪಿಎಂಸಿ ಎಂಬ ಚೌಕಟ್ಟಿನಲ್ಲಿ ನಮಗೆ ಬೇಡಿ ಹಾಕಿ ಕೂರಿಸಿದ್ದಾರೆ. ಈ ವ್ಯವಸ್ಥೆ ನಾಶವಾದ ಮೇಲೆ ಬಹು ರಾಷ್ಟ್ರೀಯ ಕಂಪನಿ ಗಳೊಂದಿಗೆ ನಾವು ಕೈಜೋಡಿಸುವುದು ಅನಿವಾರ್ಯ. ಅವರಿಗೆ ಎಲ್ಲ ಹಳ್ಳಿಗಳಿಗೆ ಹೋಗಲು ಆಗುವುದಿಲ್ಲವಲ್ಲ. ಆ ಕೆಲಸವನ್ನು ನಾವು ಮಾಡುತ್ತೇವೆ. ರೈತರು– ಕಂಪನಿಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇವೆ. ಕೆಲವು ಏಜೆಂಟರು ನಿರುದ್ಯೋಗಿಗಳು ಆಗಬಹುದು. ಎಪಿಎಂಸಿಯನ್ನು 20 ಲಕ್ಷ ಮಂದಿ ನೆಚ್ಚಿಕೊಂಡಿದ್ದಾರೆ. ಅವರ ಹಿತ ಕಾಯುವ ಕೆಲಸವನ್ನು ಸರ್ಕಾರ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.